Mysore
24
few clouds

Social Media

ಸೋಮವಾರ, 05 ಜನವರಿ 2026
Light
Dark

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು

ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ ಆರು ಮನೆಗಳಲ್ಲಿ ಬುಧವಾರ ತಡರಾತ್ರಿ ಸರಣಿಗಳ್ಳತನ ನಡೆದಿದ್ದು, ನಾಗರಿಕರು ಆತಂಕಗೊಂಡಿದ್ದಾರೆ.

ಬುಧವಾರ ರಾತ್ರಿ ನಡೆದ ಕಳ್ಳತನ ಗುರುವಾರ ಮುಂಜಾನೆ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಮೇಲುಕೋಟೆ ಒಕ್ಕಲಿಗರ ಬೀದಿಯಲ್ಲಿ ಬೀಗಹಾಕಿರುವ ಮನೆಗಳನ್ನೇ ಗುರಿ ಮಾಡಿರುವ ಕಳ್ಳರು ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿ,ಬೀರುಗಳನ್ನು ಒಡೆದು ಲಾಕರ್ ತೆರೆದು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.

ಮನೆಗಳ ಲಾಕರ್‌ನಲ್ಲಿದ್ದ ಚಿನ್ನಾಭರಣ, ದಾಖಲೆ ಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ಪಾಳು ಮನೆಯೊಂದರ ಬಳಿ ಪರಿಶೀಲಿಸಿರುವ ಕಳ್ಳರು, ಬೆಲೆಬಾಳುವ ವಸ್ತಗಳನ್ನು ಮಾತ್ರ ದೋಚಿ ದಾಖಲೆಗಳನ್ನು ಬಿಸಾಡಿ ಹೋಗಿದ್ದಾರೆ. ಮೇಲು ಕೋಟೆಯ ಒಕ್ಕಲಿಗರ ಬೀದಿ ರೈತಭವನದ ಪಕ್ಕದ ಲೇ. ತಮ್ಮಣ್ಣೇಗೌಡರ ಪತ್ನಿ ಕೆಂಪಮ್ಮ, ನಂಜುಂಡೇಗೌಡ ಎಂಬವರ ಮಗ ಈರೇಗೌಡ, ಲೀಲಾವತಿ, ಸವಿತಾ ಸಮಾಜದ ಬೀದಿಯ ಮರಿಯಮ್ಮ, ಮೂಡಲಬಾಗಿಲು ರುಕ್ಷಿಣಿ, ಬಸವರಾಜು ಎಂಬವರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ.

ಚಿನ್ನ ಬೆಳ್ಳಿ ನಗದು ಸೇರಿದಂತೆ ಸಾವಿರಾರು ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು,ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಪಮ್ಮ ಎಂಬವರು ಕುರಿಯನ್ನು ಮಾರಾಟ ಮಾಡಿ ಮನೆಯಲ್ಲಿಟ್ಟಿದ್ದ ೩೫ ಸಾವಿರ ರೂ. ನಗದು, ಒಂದು ಚಿನ್ನದ ಉಂಗುರ, ಸಣ್ಣಪುಟ್ಟ ಆಭರಣಗಳು, ಮೂಡಲಬಾಗಿಲ ರುಕ್ಮಿಣಿ ಎಂಬವರ ಮನೆಯಲ್ಲಿ ೧೦ ಸಾವಿರ ರೂ. ನಗದು ಹಾಗೂ ೨೦ ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಗ್ರಿ ಕಳವಾಗಿವೆ. ಮೇಲುಕೋಟೆಯಲ್ಲಿ ಪೊಲೀಸ್ ಬೀಟ್ ಹೆಚ್ಚಿಸಿ ಆತಂಕ ದೂರಮಾಡಬೇಕೆಂದು ನಾಗರಿಕರು ಕೋರಿದ್ದಾರೆ. ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಿಗೆ ರಾತ್ರಿಯ ವೇಳೆ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

 

Tags:
error: Content is protected !!