-ಕೊಡಗಿನ ತಲಕಾವೇರಿಯಲ್ಲಿ ತುಲಾಸಂಕ್ರಮಣ ಪವಿತ್ರ ತೀರ್ಥೋಧ್ಭವದಲ್ಲಿ ಭಾಗಿ
-ನಾಡಿನ ಸಮಸ್ತ ಜನತೆಗೆ ಹಾಗೂ ರೈತರಿಗೆ ಒಳಿತು ಮಾಡಲು ಪ್ರಾರ್ಥನೆ
ತಲಕಾವೇರಿ: ಕಾವೇರಿ ತಾಯಿಯ ಕೃಪೆಯಿಂದ ಕರುನಾಡು ಸುಭೀಕ್ಷವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ಅಭಿಪ್ರಾಯಪಟ್ಟರು.
ಇಂದು ಕೊಡಗಿನ ತಲಕಾವೇರಿಯಲ್ಲಿ ನಡೆದ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವಲ್ಲಿ ಭಾಗವಹಿಸಿ ಜೀವ ನದಿ ಕಾವೇರಿಯ ತೀರ್ಥೋಧ್ಬವ ಕ್ಷಣಗಳನ್ನು ಕಣ್ತುಂಬಿಕೊಂಡರು. ನಂತರ ಮಾತನಾಡಿದ ಅವರು, ನಮ್ಮ ನಾಡಿನ ಜೀವ ನದಿ ಕಾವೇರಿ. ಕಾವೇರಿ ತಾಯಿಯ ಕೃಪೆಯಿಂದ ನಮ್ಮ ಕರುನಾಡು ಸುಭೀಕ್ಷವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು ಅಣೆಕಟ್ಟುಗಳು, ಕೆರೆಗಳು ತುಂಬಿವೆ. ನದಿಗಳು ಮೈದುಂಬಿ ಹರಿಯುತ್ತಿವೆ. ಕಾವೇರಿ ನದಿ ಪಾತ್ರದಲ್ಲೂ ಉತ್ತಮ ಮಳೆಯಾಗಿದ್ದು ನಮ್ಮ ಮೈಸೂರು ಭಾಗದ ಜನತೆಗೆ ಉತ್ತಮ ನೀರು ಲಭ್ಯವಾಗಿದೆ. ಕಾವೇರಿ ಮಾತೆಯ ಕೊಡುಗೆ ನಮ್ಮ ನಾಡಿನ ಮೇಲೆ ಅಪಾರವಾಗಿದೆ.
ಅತ್ಯಂತ ಸಂಭ್ರಮ ಹಾಗೂ ಖುಷಿಯಿಂದ ಈ ತೀರ್ಥೋದ್ಭವವನ್ನು ಕಣ್ತುಂಬಿಕೊಂಡಿದ್ದೇನೆ. ನಾಡಿನ ಸಮಸ್ತ ಜನತೆಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಒಳಿತ ಮಾಡುವಂತೆ ಪ್ರಾರ್ಥಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪುಷ್ಪಾಲಂಕಾರದಿಂದ ಕಾವೇರಿ ಕ್ಷೇತ್ರವನ್ನು ಕಂಗೊಳಿಸುವಂತೆ ಅಲಂಕರಿಸಲಾಗಿದೆ. ದೇವಾಲಯದ ಅನ್ನ ಪ್ರಸಾದ ಸಭಾಭವನದಲ್ಲಿ ಉಪಹಾರವನ್ನು ಆಯೋಜಿಸಲಾಗಿತ್ತು.
ಕಾವೇರಿ ತೀರ್ಥೋಧ್ಭವ ಸಂಧರ್ಭದಲ್ಲಿ ಶಾಸಕರಾದ ಎ ಎಸ್ ಪೊನ್ನಣ್ಣ, ಡಾ ಮಂತರ್ ಗೌಡ, ಸುಜಾಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ರಾಮರಾಜನ್ ಉಪಸ್ಥಿತರಿದ್ದರು.
ಸಾಂಪ್ರದಾಯಿದ ಧಿರಿಸಿಸಿನಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.