Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಾಲ್ಮೀಕಿ ಕಾವ್ಯಗಳು ಭಾರತೀಯ ಸಂಸ್ಕೃತಿ ಬಿಂಬಿಸುವ ಮಹಾಕಾವ್ಯಗಳು: ʻಎಚ್‌ಸಿಎಂʼ

ಮೈಸೂರು: ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಎಲ್ಲಾ ಕಾಲಘಟ್ಟ, ಪೀಳಿಗೆಗೆ ಅನ್ವಯ. ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಮೈಸೂರಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ನಿರ್ಮಿಸಲು ಶಂಕು ಸ್ಥಾಪನೆ  ನೆರವೇರಿಸಿರುವುದು ಸಂತಸವಾಗಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.

ಪ್ರಪಂಚದಲ್ಲಿರುವ ಎಲ್ಲಾ ದೇಶಗಳಲ್ಲೂ ಮಹಾಕಾವ್ಯಗಳು ಸೃಷ್ಟಿಯಾಗಿಲ್ಲ. ಗ್ರೀಕ್, ರೋಮ್ ಬಿಟ್ಟರೆ ನಮ್ಮ ದೇಶದಲ್ಲಿ ಮಾತ್ರ ಮಹಾಕಾವ್ಯಗಳು ಕಾಣಿಸಿಕೊಳ್ಳಲು ಸಾಧ್ಯ. ರಾಮಾಯಣ, ಮಹಾಭಾರತ ಕಾವ್ಯಗಳು ಕಟ್ಟಿಕೊಡುವ ದೃಷ್ಟಿಕೋನಗಳೇ ಬೇರೆ. ಈ ಮಹಾಕಾವ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳಾಗಿವೆ. ರಾಮಾಯಣದ ಪಾತ್ರಗಳು, ದೃಶ್ಯಗಳು ಇವತ್ತಿಗೂ ನಮ್ಮನ್ನು ಕಾಡುತ್ತವೆ. ಇಂದು ವಾಲ್ಮೀಕಿ ಸಮುದಾಯದಲ್ಲಿ ಅನೇಕರು ತಮ್ಮ ಭೂಮಿಗಳನ್ನು ಮಾರಿಕೊಳ್ಳುತ್ತಿದಾರೆ. ವ್ಯವಸಾಯ ಮತ್ತು ವ್ಯವಸಾಯೇತರ ಚಟುವಟಿಕೆಗಳು ಕ್ಷಿಣಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ನಮ್ಮ ಸಮಸ್ಯೆಗಳ ಬೀಗದ ಕೈ ಇರುವುದು ರಾಜಕೀಯದಲ್ಲಿ ಎಂಬಂತೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು 7% ಜನರಿಗೆ 9 ಸಾವಿರ ಕೋಟಿಯನ್ನು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ . ಎಸ್ ಸಿ, ಎಸ್ ಟಿ ,ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ, ಶೋಷಿತ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂವಿಧಾನವನ್ನು ಬಲಪಡಿಸುವಂತಹ ಕಾರ್ಯ ನಮ್ಮ ಸರ್ಕಾರದಲ್ಲಿ ಆಗುತ್ತಿದೆ ಎಂದರು.

‘ರಾಮಾಯಣ’ ದೇಶಕ್ಕೆ ದೊರೆತ ಮಹಾಕಾವ್ಯ. ಮಹರ್ಷಿ ವಾಲ್ಮೀಕಿಯವರು ತಮ್ಮ ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯನ ಬದುಕಿನ ಎಲ್ಲಾ ಪರಿಪಾಲನೆಯನ್ನು ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ರಾಮಾಯಣ ಇರಬೇಕು. ರಾಮಾಯಣದ ಒಟ್ಟಾರೆ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂವಿಧಾನ ಕೊಟ್ಟಂತಹ ಎಲ್ಲಾ ಸೌಲಭ್ಯಗಳು ಎಲ್ಲಾ ಎಸ್ ಸಿ, ಎಸ್ ಟಿ ಸಮುದಾಯದವರಿಗೆ ಸಿಗಬೇಕು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬಂತೆ ಎಲ್ಲರೂ ಸಮಾನತೆಯಿಂದ ನಡೆದು ಸಮಸಮಾಜದ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದರು.

ಇಂದು ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿದ್ದು ಭುವನದ ಭಾಗ್ಯ. ಹಾಗಾಗಿ, ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ ಎಂದು ತಿಳಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ. ಟಿ ದೇವೇಗೌಡ  ಮಾತನಾಡಿ, ಬೇಡ ಕುಲಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಉತ್ಕೃಷ್ಟ ಮಹಾಕಾವ್ಯವನ್ನೇ ಬರೆದರು. ರಾಮನಾಮ ಉಚ್ಚಾರಣೆಯೇ ಬಾರದ ವಾಲ್ಮೀಕಿಯವರು ರಾಮಾಯಣವನ್ನೇ ರಚಿಸಿದರು. ರಾಮಾಯಣದಲ್ಲಿ 24,253 ಶ್ಲೋಕಗಳಿದ್ದು ಏಳು ಕಾಂಡಗಳಿರುವ ಈ ಕೃತಿಯು ಇಡೀ ಪ್ರಪಂಚಕ್ಕೆ ಅನ್ವಯವಾಗುತ್ತದೆ. ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು ಅನೇಕ ಶ್ಲೋಕಗಳನ್ನು ಹೊಂದಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನ ವೃತ್ತಾ0ತವನ್ನು ತಿಳಿಸಿದರು.

ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ, ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯು ಅಮರಕವಿಯಾಗಿರುತ್ತಾರೆ ಎಂದರು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ, ಈ ಬಾರಿ ಮೈಸೂರಿನಲ್ಲಿ ವಾಲ್ಮೀಕಿಯವರ ಪ್ರತಿಮೆಗೆ ಶoಕು ಸ್ಥಾಪನೆ ಮಾಡಿರುವುದು ನಮ್ಮ ಸೌಭಾಗ್ಯ ಎಂದು ಸಂತಸ ವ್ಯಕ್ತ ಪಡಿಸಿದರು. ನಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ಸಹ ಪರೋಕ್ಷವಾಗಿ ವಾಲ್ಮೀಕಿಯವರ ತತ್ತ್ವಾದರ್ಶಗಳನ್ನು ಅನುಸರಿಸುತ್ತಿದ್ದೇವೆ. ವಾಲ್ಮೀಕಿ ಯವರು ನೀಡಿರುವ ರಾಮಾಯಣ ಮಹಾಕಾವ್ಯದ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅವರ ಸನ್ಮಾರ್ಗಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾದ ಪ್ರೊ. ಎನ್ ಕೆ ಲೋಲಾಕ್ಷಿ ಅವರು ಮಾತನಾಡಿ, ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.

ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ‘ಕವಿಗಳ ಕವಿ’ ಎಂದು ಮಹಾಕವಿ ಕಾಳಿದಾಸರು ಗೌರವಿಸಿದ್ದಾರೆ ಎಂದು ಹೇಳಿದರು.

ರಾಮಾಯಣ ಕೇವಲ ಕಾವ್ಯವಲ್ಲ. ಇದು ದೇಶದ ಮೊಟ್ಟ ಮೊದಲ ಸಂವಿಧಾನ. ಜಗತ್ತಿಗೆ ಮಹಾಕಾವ್ಯವನ್ನು ಕೊಟ್ಟ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಇಂದು ಅಯೋಧ್ಯೆಯಲ್ಲಿ ನಿರ್ಮಿತವಾಗಿರುವ ಶ್ರೀ ರಾಮನ ಮೂರ್ತಿಯು ವಾಲ್ಮೀಕಿಯವರ ಇರುವಂತಿಕೆಯನ್ನು ತೋರಿಸುತ್ತಿದೆ. ರಾಮಾಯಣ ಜಗತ್ ಕಾವ್ಯ. ವಾಲ್ಮೀಕಿಯವರನ್ನು ಪೂಜಿಸುವುದಲ್ಲದೆ ಅವರ ತತ್ವಗಳನ್ನು ಪಾಲಿಸಬೇಕು. ವಾಲ್ಮೀಕಿಯವರನ್ನು ‘ಜಗದ್ ಮೇಷ್ಟ್ರು’ ಎಂದೇ ಕರೆಯಬಹುದು. ಜಗತ್ತಿನಲ್ಲಿ ರಾಮನಿಗೂ ಅಂತ್ಯ ವಿಲ್ಲ, ವಾಲ್ಮೀಕಿಗೂ ಅಂತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಹರ್ಷಿ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿ ಕು.ಲಾವಣ್ಯ ಅವರಿಗೆ ಸರ್ಕಾರದಿಂದ ಒಂದು ಲಕ್ಷ ಪ್ರೋತ್ಸಾಹಧನದ ಚೆಕ್ ವಿತರಿಸಿ, ಸಚಿವರು ಸೇರಿದಂತೆ ಶಾಸಕರು ಸನ್ಮಾನವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಶಾಸಕರಾದ ಸಿ. ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ. ಎಂ. ಗಾಯತ್ರಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಎನ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಧಿಕಾರಿಗಳಾದ ಎಂ. ಕೆ. ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆಯೆ ಜಂಟಿ ನಿರ್ದೇಶಕರಾದ ಬಿ.ರಂಗೇಗೌಡ, ಸಮಾಜದ ಮುಖಂಡರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: