Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಮಾರ್ಟಿನ್‍’ ಕಲೆಕ್ಷನ್‍ ಎಷ್ಟು?; ಅಡ್ಡಗೋಡೆ ಮೇಲೆ ದೀಪ ಇಟ್ಟ ಚಿತ್ರತಂಡ

ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’, ಶುಕ್ರವಾರ ಇಡೀ ದೇಶಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಕನ್ನಡದ ಅತೀ ಹೆಚ್ಚು ಬಜೆಟ್‍ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ, ಬಿಡುಗಡೆಯಾದ ಮೂರು ದಿನಗಳಲ್ಲಿ ಮಾಡಿದ ಕಲೆಕ್ಷನ್‍ ಎಷ್ಟು? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇದೆ.

ಬಾಕ್ಸ್ ಆಫೀಸ್‍ ಗಳಿಕೆ ಟ್ರಾಕ್‍ ಮಾಡುವ ಸಕಿನಿಕ್‍ ಡಾಟ್‍ಕಾಮ್‍ ಪ್ರಕಾರ, ‘ಮಾರ್ಟಿನ್‍’ ಚಿತ್ರವು ಮೊದಲ ಮೂರು ದಿನಗಳಲ್ಲಿ ಗಳಿಕೆ ಮಾಡಿರುವ ಮೊತ್ತ ಕೇವಲ 15.50 ಕೋಟಿ ರೂ. ಮಾತ್ರ. ಈ ಪೈಕಿ ಮೊದಲ ದಿನ ಚಿತ್ರವು 6.7 ಕೋಟಿ ರೂ. ಗಳಿಕೆ ಮಾಡಿದರೆ, ಎರಡನೇ ದಿನ 5.5 ಕೋಟಿ ರೂ. ಸಂಗ್ರಹ ಮಾಡಿದೆ. ಮೂರನೆಯ ದಿನ 3.35 ಕೋಟಿ ರೂ. ಗಳಿಕೆ ಆಗಿದೆ. ಒಟ್ಟಾರೆ ಮೂರು ದಿನಗಳಲ್ಲಿ ಚಿತ್ರವು ಇಡೀ ದೇಶಾದ್ಯಂತ ಗಳಿಕೆ ಮಾಡಿರುವ ಮೊತ್ತ ಕೇವಲ 15.5 ಕೋಟಿ ರೂ. ಮಾತ್ರ.

ಹೀಗಿರುವಾಗಲೇ, ಚಿತ್ರತಂಡದವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿ ಮಾಡಿ, ಚಿತ್ರವು ಯಶಸ್ವಿಯಾಗಿದೆ ಎಂದು ಸಂಭ್ರಮ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕೆ ನಿರ್ಮಾಪಕ ಉದಯ್‍ ಮೆಹ್ತಾ ಇರಲಿಲ್ಲ. ಅವರ ಬದಲು ಮಾತನಾಡಿದ ಅವರ ಮಗ ಸೂರಜ್‍ ಮೆಹ್ತಾ, ‘ಈ ವರ್ಷ ಬಿಡುಗಡೆಯಾದ ಎಲ್ಲ ಚಿತ್ರಗಳಲ್ಲೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ. ಕಲೆಕ್ಷನ್‍ ಚೆನ್ನಾಗಿದೆ. ಎಷ್ಟಾಗಿದೆ ಎಂಬುದು ವಾರದ ಕೊನೆಗೆ ಗೊತ್ತಾಗುತ್ತದೆ’ ಎಂದು ಹೇಳಿದರು.

ಇನ್ನು, ಈ ಕುರಿತು ಮಾತನಾಡಿರುವ ಧ್ರುವ ಸರ್ಜಾ, ‘ಚಿತ್ರದ ಕಲೆಕ್ಷನ್‍ ಈಗಲೇ ಗೊತ್ತಾಗುವುದಿಲ್ಲ. ಸದ್ಯ ಎರಡು ದಿನಗಳ ಕೆಲಕ್ಷನ್‍ ಅಷ್ಟೇ ಗೊತ್ತಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರತಂಡದವರು ಚಿತ್ರದ ಕಲೆಕ್ಷನ್‍ ಹೇಳದೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

‘ಮಾರ್ಟಿನ್‍’ ಚಿತ್ರವನ್ನು ವಾಸವಿ ಕಂಬೈನ್ಸ್ನಡಿ ಉದಯ್‍ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್‍ ಸರ್ಜಾ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್‍, ಅಚ್ಯುತ್‍ ಕುಮಾರ್‍ ಮುಂತಾದವರು ನಟಿಸಿದ್ದು, ಎ.ಪಿ. ಅರ್ಜುನ್‍ ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ಮಣಿಶರ್ಮ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags: