ಮೈಸೂರು: ಜನಮನ ಸೆಳೆಯುವ, ಕಣ್ಮನ ತಣಿಸುವ ಸಾಂಸ್ಕೃತಿಕ ಶ್ರೀಮಂತಿಕೆಯ ಮೈಸೂರು ದಸರಾ ವಿಜೃಂಭಣೆಯಿಂದ ಜರುಗುತ್ತಿದೆ. ಕ್ಯಾಪ್ಟನ್ ಅಭಿಮನ್ಯು ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ದಸರಾದಲ್ಲಿ ಹೆಜ್ಜೆ ಹಾಕಲಿದ್ದಾನೆ. ಆದರೆ, ಸತತ ಐದನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಧೈರ್ಯ ತುಂಬಿದ್ದೆ ಅರ್ಜುನ ಆನೆ.
ಆದರೆ, ಅರ್ಜುನ ಇಂದು ನಮ್ಮೊಂದಿಗಿಲ್ಲ. ಕಳೆದ ವರ್ಷ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ. ಆದರೆ, ಅರ್ಜುನನ ನೆನಪು ಮಾತ್ರ ಮಾಸದೆ ಹಾಗೆಯೇ ಉಳಿದಿದೆ. ದಸರಾದಲ್ಲಿ ಅರ್ಜುನನ ಹೆಜ್ಜೆಯನ್ನು ಕಂಡವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂದು ಅಂಬಾರಿ ಹೊರುತ್ತಿರುವ ಅಭಿಮನ್ಯು ಸಹ ಅರ್ಜುನನಿಂದ ಹಲವು ವಿಚಾರಗಳನ್ನು ಕಲಿತ್ತಿದ್ದಾನೆ. ಆತ ಜೊತೆಗಿದ್ದಾಗ ಅಭಿಮನ್ಯುಗೆ ಹೇಳಿಕೊಟ್ಟ ಧೈರ್ಯದ ಪಾಠವೇ ಇಂದು ಸಂಭ್ರಮ ಮತ್ತು ಸುಸೂತ್ರದ ದಸರೆಯಾಗಿದೆ. ಹೀಗಾಗಿ ಅರ್ಜುನನ್ನು ಇಂದು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.
ಅರ್ಜುನನ ಹಿನ್ನೆಲೆ…..
1968ರಲ್ಲಿ ಕಾಕನಕೋಟೆಯ ಕಾರ್ಯಚರಣೆಯಲ್ಲಿ ಸೆರೆಸಿಕ್ಕಿದ್ದ ಅರ್ಜುನ ಆನೆಯನ್ನು ಮಾವುತರು ಚೆನ್ನಾಗಿ ಪಳಗಿಸಿ ನಂತರ 1990ರಲ್ಲಿ ಮೈಸೂರಿನ ದಸರಾ ಉತ್ಸವದ ಶಿಬಿರಕ್ಕೆ ಕರೆತರಲಾಗಿತ್ತು. ಬಲರಾಮ ಆನೆ ಬಳಿಕ ಅರ್ಜುನನೇ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ. ಅರ್ಜುನನು 6040ಕೆಜಿ ತೂಕ, 2.95ಮೀಟರ್ ಉದ್ದ ಇದ್ದ. ಸತತ 22ವರ್ಷದಿಂದ ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ. ಅರ್ಜುನ ಸಾವನ್ನಪ್ಪಿವಾಗ ಆತನಿಗೆ 63ವರ್ಷ ವಯಸ್ಸಾಗಿತ್ತು..