Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ತಮ್ಮದೇ ಸರ್ಕಾರಕ್ಕೆ ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ

ಚಿಕ್ಕೋಡಿ(ಬೆಳಗಾವಿ): ಸರ್ಕಾರ ನಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜೊತೆಗೆ ರೈತರ ಪರ ಯಾವುದೇ ಯೋಜನೆಗಳು ಬರುತ್ತಿಲ್ಲ. ರೈತರು ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಕಾಗವಾಡ ವಿಧಾನಸಭಾ ಕ್ಷೇತ್ರದ ತಾವಂಶಿ ಗ್ರಾಮದಲ್ಲಿ ಮಾತನಾಡಿದ ಅವರು, ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೆ ನೀವೇನು ತಿಂತೀರಿ?. ನಿಮ್ಮ ಬಳಿ ಹಣ, ಬಂಗಾರ ಬೆಳ್ಳಿ ಸಾಕಷ್ಟಿರಬಹುದು. ಅದನ್ನು ತಿಂದು ಬದುಕೋಗಾಗುತ್ತಾ?. ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ. ರೈತರು ಬದುಕಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ತಮ್ಮ ಪಕ್ಷದ ವಿರುದ್ಧ ಅಸಮಪರ್ಕತೆ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ವಿಧಾನಸೌಧದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓರ್ವ ಮಂತ್ರಿಗೆ ಹೇಳಿದೆ. ಆದರೆ ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತೀಯಾ, ನಿನ್ನ ಕೆಲಸ ಮಾಡಿಕೊಡ್ತೀವಿ ಎಂದು ಮಂತ್ರಿಗಳು ಹೇಳಿದರು ಎಂದು ಆಕ್ರೋಶ  ವ್ಯಕ್ತಪಡಿಸಿದರು.

ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಮೋಜು, ಮಸ್ತಿ ಮಾಡುತ್ತಿಲ್ಲ. ರೈತರ ಕಷ್ಟ-ಸುಖಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ಆದರೆ, ಸರ್ಕಾರದವರು ನಮಗೆ ಸ್ಪಂದಿಸುತ್ತಿಲ್ಲ. ಬೇಕಾದರೆ ನಾಳೆನೇ ಹೋಗಿ ರಾಜೀನಾಮೆ ಕೊಡುತ್ತೇನೆ” ಎಂದು ಆಕ್ರೋಶ ಹೊರಹಾಕಿದರು.

ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳ್ತಿದ್ದೀನಿ ಅಂದ್ರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂಬುದನ್ನು ಅರ್ಥ ಮಾಡ್ಕೊಳ್ಳಿ. ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ ಮುಂದಿನ ನಾನು ಎಂಎಲ್ಎ ಆಗುವುದು ಬೇಕಾಗಿಲ್ಲ” ಎಂದು ಕ್ಷೇತ್ರದ ಜನತೆ ಮುಂದೆಯೇ ತಮ್ಮ ಅಸಹಾಯಕತೆ ತೋಡಿಕೊಂಡರು.

 

Tags: