ಕೊಡಗು: ಜೀವನದಿಯಾದ ಕಾವೇರಿ ತೀರ್ಥೋದ್ಬವಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ಅಕ್ಟೋಬರ್.17ರ ಬೆಳಿಗ್ಗೆ 7.40ಕ್ಕೆ ಕಾವೇರಿ ತೀರ್ಥೋದ್ಬವವಾಗಲಿದೆ. ತುಲಾ ಲಗ್ನದಲ್ಲಿ ಜೀವನದಿ ಕಾವೇರಿ ಉಗಮವಾಗಲಿದ್ದು, ಅರ್ಚಕರು ಹಾಗೂ ದೇವಸ್ಥಾನದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.
ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ.
ಅದರಂತೆ ಪ್ರತಿವರ್ಷ ತೀರ್ಥೋದ್ಬವದ ಸಮಯದಲ್ಲಿ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಕಾವೇರಿ ತೀರ್ಥೋದ್ಬವಕ್ಕೆ ಸರ್ಕಾರವು 75 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಅಂದಿನ ದಿನ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಅಂದಾಜು ಮಾಡಲಾಗಿದೆ.
ಅಂದು ತಲಕಾವೇರಿಗೆ ಬರುವ ಎಲ್ಲಾ ಸಾರ್ವಜನಿಕರಿಗೂ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.