ಶ್ರೀರಂಗಪಟ್ಟಣ: ಇಲ್ಲಿ ಅ.4ರಿಂದ 7 ರವರೆಗೆ(ಇಂದು) ನಡೆದ ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸೋಮವಾರ ಸಂಭ್ರಮದ ತೆರೆಬಿತ್ತು.
ಮೊದಲ ದಿನ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ನಟ ಡಾ.ಶಿವರಾಜ್ ಕುಮಾರ್ ಚಾಲನೆ ನೀಡಿದ್ದರು. ಕಿರಂಗೂರಿನ ಬನ್ನಿಮಂಟಪದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದವರೆಗೆ 3 ಕಿ.ಮೀ. ದೂರ ಮಹೇಂದ್ರ ಆನೆ ಮೂರನೆ ಬಾರಿಗೆ ಚಾಮುಂಡೇಶ್ವರಿ ಉತ್ಸವವನ್ನು ಗಜ ಗಾಂರ್ಭಿಯದಿಂದ ಹೊತ್ತು ಸಾಗಿ ಜನರಲ್ಲಿ ಸಂತಸ ಇಮ್ಮಡಿಗೊಳಿಸಿತು. ಮೆರವಣಿಗೆ ಉದ್ದಕ್ಕೂ ಇದ್ದ ಸಹಸ್ರಾರು ಮಂದಿ, ಕುಳಿತು, ನಿಂತು ವೀಕ್ಷಣೆ ಮಾಡುವ ಮೂಲಕ ದಸರೆಯನ್ನು ಕಣ್ತುಂಬಿಕೊಂಡಿದ್ದರು.
ಇನ್ನೂ ಉಳಿದ ಮೂರು ದಿನ ಶ್ರೀರಂಗನಾಥ ಸ್ವಾಮಿ ಮೈದಾನ ಆವರಣದಲ್ಲಿರುವ ದಸರಾ ಸಾಂಸ್ಕೃತಿಕ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮಗಳು ನಡೆದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದವು.
ಶ್ರೀರಂಗಪಟ್ಟಣ ದಸರಾ ಹಬ್ಬ ಯಶಸ್ಸು ಕಂಡಿದೆ: ಎನ್ ಚಲುವರಾಯಸ್ವಾಮಿ
ಈ ಬಾರಿಯ ಶ್ರೀರಂಗಪಟ್ಟಣ ದಸರಾದಲ್ಲಿ ಹೆಚ್ಚಿನ ಸಾರ್ವಜನಿಕರು ಪಾಲ್ಗೊಳ್ಳುವಿಕೆಯಿಂದ ಬಹಳ ಯಶಸ್ವಿ ಹಾಗೂ ವಿಜೃಂಭಣೆಯಿಂದ ಜರುಗಿರುತ್ತದೆ ಇದು ಬಹಳ ಸಂತೋಷದ ವಿಷಯವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣ ದಸರಾ ಹಬ್ಬದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವನ್ನು ಕಳೆದ ನಾಲ್ಕು ದಿನಗಳಿಂದ ಬಹಳ ವಿಜೃಂಭಣೆಯಿಂದ ಆಚರಿಸಿ ಇಂದು ಅಂತಿಮ ಘಟ್ಟಕ್ಕೆ ಬಂದಿದ್ದೇವೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದಂತಹ ಪ್ರತಿಯೊಬ್ಬರಿಗೂ ಅಭಿನಂದನೆ ಅರ್ಪಿಸುತ್ತೇನೆ ಎಂದ ಅವರು ಸಾರ್ವಜನಿಕರಿಗೆ ಮುಂಬರುವ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ನಾಲ್ಕು ದಿನಗಳ ಕಾಲ ಜರುಗಿದ ದಸರಾ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸೇರಿದಂತೆ ಅನೇಕ ಜನಪರವಾದ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು ಎಂದರು.
ಅನೇಕ ವರ್ಷಗಳ ನಂತರಆಷಾಢ ಮಾಸದಲ್ಲಿ ಈ ಬಾರಿ ಕೆ ಆರ್ ಎಸ್ ಡ್ಯಾಮ್ ತುಂಬಿದ್ದು, ಕಾವೇರಿ ಮಾತೆಗೆ ಮಾನ್ಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಬಾಗಿನವನ್ನು ಅರ್ಪಿಸಲಾಯಿತು. ಜೊತೆಗೆ ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ವರುಣನ ಆಶೀರ್ವಾದದಿಂದ ಸಾಕಷ್ಟು ಮಳೆಯಾಗುತ್ತಿದ್ದು ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದರು.
ನಮ್ಮ ಸರ್ಕಾರವು ಪ್ರತಿ ಕುಟುಂಬಕ್ಕೂ ಗ್ಯಾರೆಂಟಿ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಯನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದೆ. ಮಂಡ್ಯ ಜಿಲ್ಲೆ ಪ್ರತಿಯೊಬ್ಬ ರೈತರ ಆಶಾಯದಂತೆ ನಿಂತು ಹೋಗಿದ್ದ ಮೈ ಶುಗರ್ ಕಾರ್ಖಾನೆಯ ಕಬ್ಬು ಅರೆಯುವಿಕೆಯನ್ನು ಈ ವರ್ಷ ಆರಂಭಿಸಲಾಗಿದೆ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದು ನಾಲ್ಕು ದಿನಗಳಿಂದ ನಡೆಯುತ್ತಿರುವ ಶ್ರೀರಂಗಪಟ್ಟಣ ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವಂತಹ ಕೆಲಸವಾಗುತ್ತಿದೆ ಎಂದರು.
ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರುಗಿದೆ. ಈ ವೇದಿಕೆಯ ಮುಖಾಂತರ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡಲಾಗಿದೆ. ಅವರು ಪ್ರದರ್ಶನ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ. ದಸರಾ ಉತ್ಸವದ ಮೂಲಕ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೇರಲಿ ಎಂದು ತಿಳಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ. ರಾಮೇಶ ಬಾಬು ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ವಂದಿಸಿದರು.
ಗಣ್ಯರನ್ನು ಆತ್ಮೀಯವಾಗಿ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಸ್ವಾಗತಿಸಿದರು.
ಸಮಾರೋಪ ಸಮಾರಂಭದಲ್ಲಿ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ವಿವೇಕನಂದ, ಕಿರಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ, ಕೆ.ಪಿ.ಎಸ್.ಸಿ ಸದಸ್ಯ ಬಿ.ಪ್ರಭುದೇವ್, ಮನ್ ಮುಲ್ ಅಧ್ಯಕ್ಷ ಬೋರೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶಿಲ್ದಾರ್ ಪರಶುರಾಮ್ ಸತ್ತೀಗೇರಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.