ರಾಯಚೂರು: ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ಜಾರಿಗೆ ತರುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಅನ್ವಯ ಒಳ ಮೀಸಲಾತಿಗೆ ನಮ್ಮ ಸರ್ಕಾರದ ವಿರೋಧವಿಲ್ಲ. ಆದರೆ ಈಗ ನೀಡಿರುವ ಜಾತಿಗಣತಿ ವರದಿ ಸಚಿವ ಸಂಪುಟ ಸಭೆ ಮತ್ತು ವರಿಷ್ಠರೊಂದಿಗೆ ಚರ್ಚಿಸಿ, ಅವುಗಳಲ್ಲಿ ದೋಷ ಕಂಡುಬಂದರೆ ಅದನ್ನು ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಅವರು, ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುವ ಕೆಲಸ ಮಾಡಲಾಗುವುದು. ಬಿಜೆಪಿ-ಜೆಡಿಎಸ್ ಪಕ್ಷಗಳು ಪ್ರತಿನಿತ್ಯ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ರಾಜೀನಾಮೆ ಬೇಡಿದರೆ, ನಾನು ಅವರ ಬೇಡಿಕೆಯಂತೆ ರಾಜೀನಾಮೇ ನೀಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಾಮಾನ್ಯ. ವಿರೋಧ ಪಕ್ಷಗಳ ನಾಯಕರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಊಹಾಪೋಹಗಳ ಅವಶ್ಯಕತೆ ಇಲ್ಲ. ದಿನನಿತ್ಯ ನನ್ನ ಮೇಲೆ ಆರೋಪಗಳನ್ನು ಮಾಡಿದ್ದೇ ಆದಲ್ಲಿ ಆಗ ಮಾತ್ರ ನಮ್ಮ ಸರ್ಕಾರ ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.