ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾಕ್ಕೆ ಕಿರಂಗೂರಿನ ಬನ್ನಿಮಂಟಪದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ಡಾ.ಶಿವರಾಜ್‌ಕುಮಾರ್ ಚಾಲನೆ ನೀಡಿದ್ದು, ಬಳಿಕ ಶ್ರೀರಂಗದೇವಾಲಯದ ಮುಂಭಾಗ ವೇದಿಕೆ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆ, ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳು ಜೈಕಾರ ಹಾಕಿದರು.
ವೇದಿಕೆಯಲ್ಲಿ ಶಿವಣ್ಣ ನಟನೆಯ ಬೈರತಿ ರಣಗಲ್ ಚಿತ್ರದ ಟೀಸರ್ ಪ್ರದರ್ಶನ್ ಮಾಡಲಾಯಿತು.
ಶ್ರೀರಂಗಪಟ್ಟಣ, ಮೈಸೂರು ಅದೃಷ್ಟದ ಸ್ಥಳ
ಬಳಿಕ ಮಾತನಾಡಿದ ಅವರು, ಬಹಳಷ್ಟು ಚಲನಚಿತ್ರಗಳನ್ನು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೀರಂಗಪಟ್ಟಣದಲ್ಲಿ ಅಭಿಮಾನಿಗಳು, ಬಂಧುಬಳಗ ಹೆಚ್ಚು, ಶ್ರೀರಂಗಪಟ್ಟಣ ಹಾಗೂ ಮೈಸೂರು ನನಗೆ ಅದೃಷ್ಟದ ಸ್ಥಳಗಳಾಗಿದ್ದು, ಇಲ್ಲಿ ಮಾಡುವ ಚಲನಚಿತ್ರಗಳು ಯಶಸ್ವಿಯಾಗಿದೆ ಎಂದು ನುಡಿದರು.
ಯಾವುದೇ ಜಾತಿ, ಮತ, ಪಂಥಗಳಿಗೆ ಹಬ್ಬ ಮೀಸಲಾಗದೇ ಎಲ್ಲರೂ ಒಟ್ಟಿಗೆ ಭಾಗವಹಿಸಿ ಆಚರಿಸುವ ಹಬ್ಬವೇ ದಸರಾ ಹಬ್ಬವಾಗಿದೆ. ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದರು.
ನಂತರ, ಹಸಿದಾಗ ಅನ್ನ ದಣಿದಾಗ ನೀರು, ಇವನ್ಯಾರ ಮಗನೋ, ಯಾರೇ ಕೂಗಾಡಲಿ, ಗೊಂಬೆ ಹೇಳುತೈತೆ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.





