Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಇಂದಿನಿಂದ ಶ್ರೀರಂಗಪಟ್ಟಣ ದಸರಾ: ಮೊದಲ ಮೈಸೂರು ದಸರಾ ಶುರುವಾಗಿದ್ದು ಇಲ್ಲೇ!!

ಮೈಸೂರು: ಬರೊಬ್ಬರಿ 414 ವರ್ಷಗಳ ಇತಿಹಾಸವಿರುವ ನಾಡಹಬ್ಬ ಮೈಸೂರು ದಸರಾ ವಿಶ್ವದ ಗಮನ ಸೆಳೆದಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಮಂದಿ ಮೈಸೂರಿನತ್ತ ಮುಖ ಮಾಡುತ್ತಾರೆ. ಆದರೆ, ಈ ದಸರಾ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ ಐತಿಹಾಸಿಕ ಪಟ್ಟಣ ಶ್ರೀರಂಗಪಟ್ಟಣದಲ್ಲಿ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ…..

ಮೈಸೂರಿನಲ್ಲಿ ದಸರಾ ಆಚರಣೆಗೂ ಮುನ್ನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮೊಟ್ಟ ಮೊದಲನೆಯದಾಗಿ ದಸರಾ ಆಚರಣೆ ಪ್ರಾರಂಭವಾಯಿತು. ಈ ಹಿಂದೆ ವಿಜಯನಗರ ಅರಸರ ಸಾಮಂತ ರಾಜರಾಗಿದ್ದ ಶ್ರೀರಂಗರಾಯ ಶ್ರೀರಂಗಪಟ್ಟಣದಲ್ಲಿ ಆಡಳಿತ ನಡೆಸುತ್ತಿದ್ದರು. ಈತನ ಕಾಲದಲ್ಲಿಯೇ ನವರಾತ್ರಿ ಆಚರಣೆ ಇಲ್ಲಿ ನಡೆಯುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಆದರೆ, 1610 ರಲ್ಲಿ ಶ್ರೀರಂಗಪಟ್ಟಣಕ್ಕೆ ದಂಡೆತ್ತಿ ಬಂದ ಮೈಸೂರು ರಾಜರಾದ ಯದುವಂಶದ ರಾಜ ಒಡೆಯರ್‌ ಶ್ರೀರಂಗಪಟ್ಟಣವನ್ನು ವಶಕ್ಕೆ ಪಡೆದುಕೊಂಡರು. ಇಲ್ಲಿಯವರೆಗೆ ಹದಿನಾಡನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಮೈಸೂರು ರಾಜರು ಶ್ರೀರಂಗಪಟ್ಟಣ ತಮ್ಮ ತೆಕ್ಕೆಗೆ ಬಂದ ಬಳಿಕ ಶ್ರೀರಂಗಪಟ್ಟಣವನ್ನೇ ರಾಜಾಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುವ ವೇಳೆ, ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆ ಆರಂಭಿಸಿದರು ಎಂಬುದು ಇತಿಹಾಸವಾಗಿದೆ.

ವಿಜಯನಗರ ಸಾಮ್ರಾಜ್ಯದ ವಿಜಯದಶಮಿ ಆಚರಣೆಯನ್ನು ರಾಜ ಒಡೆಯರ್‌ ಶ್ರೀರಂಗಪಟ್ಟಣದಲ್ಲಿ ಆಚರಿಸುವ ಮೂಲಕ ದಸರಾ ಆಚರಣೆಗೆ ಮುನ್ನುಡಿ ಬರೆದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ(1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದರು. ಇಲ್ಲಿಯೂ ದಸರಾ ಆಚರಣೆಯನ್ನು ಮುಂದುವರೆಸಿದರು. ಬಳಿಕ, ಮೈಸೂರು ದಸರಾವಾಗಿ ಖ್ಯಾತಿ ಪಡೆದಿತ್ತು ಇತಿಹಾಸ.

ಅತ್ತ ಶ್ರೀರಂಗಪಟ್ಟಣ ದಸರಾ ಮಂಕಾಯಿತು. ಇತ್ತೀಚೆಗೆ ಮಂಡ್ಯ ಜನರ ಬಯಕೆಯಂತೆ 2008ರಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ಜಿಲ್ಲಾಡಳಿತ ಮುಂದಾಯಿತು. ಅಲ್ಲಿಂದ ಪ್ರತಿ ವರ್ಷ ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. ಬಳಿಕ, ವೈದಿಕರ ತಂಡ ಪ್ರಥಮವಾಗಿ ನಂದಿ ದ್ವಜಕ್ಕೆ ಪೂಜೆ ಸಲ್ಲಿಸಿ, ಪೂಜಾಕೈಂಕರ್ಯ ಮಾಡುವ ಮೂಲಕ ದಸರಾವು ವಿದ್ಯುಕ್ತವಾಗಿ ಆರಂಭವಾಗುತ್ತದೆ.

ಇಂದಿನಿಂದ ಶ್ರೀರಂಗಪಟ್ಟಣ ದಸರಾ ಆರಂಭ

ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಇಂದಿನಿಂದ ಆರಂಭವಾಗಿದೆ. ಖ್ಯಾತ ನಟ ಡಾ. ಶಿವರಾಜ್‌ಕುಮಾರ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಿಂದ ಜಂಬೂಸವಾರಿ ಆರಂಭವಾಯಿತು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ನಂದಿ ಪೂಜೆ ಮಾಡಿ, ಚಾಮುಂಡಿಗೆ ಪುಷ್ಪರ್ಚನೆ ಮಾಡಿದರು.

 

Tags: