Mysore
14
scattered clouds

Social Media

ಬುಧವಾರ, 07 ಜನವರಿ 2026
Light
Dark

ರೈತರಿಂದ ಖರೀದಿಸುವ ಹಾಲಿನ ದರ ಕಡಿತ

ಹೈನುಗಾರಿಕೆಯನ್ನು ಅವಲಂಬಿಸಿರುವ ರೈತ ಕುಟುಂಬಗಳಿಗೆ ಹೊಡೆತ

ಮಂಜು ಕೋಟೆ
ಎಚ್. ಡಿ. ಕೋಟೆ: ಮೈಮುಲ್ ಆಡಳಿತ ಮಂಡಳಿಯವರು ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿಮೆ ಮಾಡಿರುವುದರಿಂದ ರೈತರಿಗೆ ಹೊಡೆತ ಬಿದ್ದಿದೆ.

ಜಿಲ್ಲೆಯಲ್ಲಿ ಹೈನುಗಾರಿಕೆ ಮುಖಾಂತರ ರೈತರು ಆರ್ಥಿಕ ಬೆಳವಣಿಗೆ ಕಾಣುತ್ತಿರುವ ಇಂತಹ ಸಂದರ್ಭದಲ್ಲಿ ಪ್ರತಿ ಲೀಟರ್ ಹಾಲಿಗೆ ೨ ರೂ. ಗಳನ್ನು ಕಡಿತಗೊಳಿಸಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಆಂಧ್ರಪ್ರದೇಶದ ತಿರುಪತಿಯ ಲಾಡು ಪ್ರಕರಣದಿಂದ ಕರ್ನಾಟಕದ ನಂದಿನಿ ಹಾಲು, ತುಪ್ಪ, ಬೆಣ್ಣೆ, ಮೊಸರು ಇನ್ನಿತರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ರೈತರು ಡೇರಿಗಳಿಗೆ ನೀಡುವ ಹಾಲಿನ ದರ ಕಡಿತ ಮಾಡಿದ್ದು, ಪ್ರತಿಯೊಬ್ಬ ರೈತರಿಗೂ ಪ್ರತಿನಿತ್ಯ ೫೦ ರಿಂದ ೧೦೦ ರೂ. ವರೆಗೆ ಆದಾಯ ಕಡಿಮೆಯಾಗಿದೆ.

ಸರ್ಕಾರದಿಂದ ಪ್ರತಿ ಲೀಟರ್‌ಗೆ ನೀಡುತ್ತಿದ್ದ ಪ್ರೋತ್ಸಾಹ ಧನ ೫ ರೂ. ಗಳು ಕಳೆದ ೭ ತಿಂಗಳಿನಿಂದ ರೈತರಿಗೆ ಸೇರಿಲ್ಲ. ಈ ನಡುವೆ ಸಾವಿರಾರು ರೂ. ಖರ್ಚು ಮಾಡಿ, ಸಾಲ ಮಾಡಿ ಜಾನುವಾರುಗಳ ಸಾಕಣೆ ಮಾಡುತ್ತಾ ಹೈನುಗಾರಿಕೆ ನಡೆಸುತ್ತಿದ್ದಾರೆ. ಪ್ರತಿ ಲೀಟರ್ ಹಾಲನ್ನು ಹಸುವಿನಿಂದ ಪಡೆಯ ಬೇಕಾದರೆ ರೈತ ಕುಟುಂಬ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸ ಮಾಡಬೇಕಾಗಿದೆ.

ಡೇರಿಗೆ ನೀಡುತ್ತಿದ್ದ ಪ್ರತಿ ಲೀಟರ್ ಹಾಲಿಗೆ ೩೩ ರೂ. ನಂತೆ ಮೈಮುಲ್ ೧೫ ದಿನಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ ಮೊತ್ತವನ್ನು ಜಮಾ ಮಾಡುತ್ತಿತ್ತು. ಈಗ ಪ್ರತಿ ಲೀಟರ್ ಹಾಲಿಗೆ ೨ ರೂ. ಕಡಿಮೆ ಮಾಡಿರುವುದರಿಂದ ಜಿಲ್ಲೆಯ ೯೬,೨೧೬ ರೈತರಿಗೆ ೯ ಲಕ್ಷ ಲೀಟರ್ ಹಾಲಿಗೆ ಬೆಲೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಬರುವುದರಿಂದ ಹೈನುಗಾರಿಕೆಯನ್ನು ಉಳಿಸಿಕೊಂಡು ಹಾಲು ಉತ್ಪಾದನೆ ಮಾಡುವುದು ಸವಾಲಿನ ಕೆಲಸವಾಗಲಿದೆ. ಆದ್ದರಿಂದ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಹೆಚ್ಚು ಮಾಡಿದರೆ ಮಾತ್ರ ಹೈನುಗಾರಿಕೆ ಉಳಿಯಲು ಸಾಧ್ಯವಾಗಲಿದೆ ಎನ್ನುತ್ತಾರೆ ಹಾಲು ಉತ್ಪಾದಕರು.

ಒಂದು ತಿಂಗಳಿನಿಂದ ರೈತರಿಗೆ ಹಾಲು ಸರಬರಾಜು ಮಾಡಿರುವ ಹಣವನ್ನು ನೀಡಿಲ್ಲ. ಇದನ್ನು ಸರಿದೂಗಿಸಲು ಪ್ರತಿ ಲೀಟರ್‌ಗೆ ೨ ರೂ. ಗಳನ್ನು ಕಡಿಮೆ ಮಾಡಲಾಗಿದೆ. ಇದು ತಾತ್ಕಾಲಿಕವಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರ ಹಾಲಿಗೆ ನೀಡುತ್ತಿರುವ ದರಕ್ಕಿಂತ ಅತಿ ಹೆಚ್ಚು ಬೆಲೆಯನ್ನು ನಾವು ನೀಡುತ್ತಿದ್ದೇವೆ. ಮೈಮುಲ್ ರೈತರ ಪರವಾಗಿ ಕೆಲಸ ಮಾಡುತ್ತಿದೆ. -ಚೆಲುವರಾಜು, ಮೈಮುಲ್ ಅಧ್ಯಕ್ಷರು

 

 

Tags:
error: Content is protected !!