Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ದಸರಾ ಮುಖ್ಯಮಂತ್ರಿ ಕಪ್’ಗೆ ಹರ್ಮನ್ ಪ್ರೀತ್‌ಸಿಂಗ್ ಅತಿಥಿ

ಜಿ. ತಂಗಂ ಗೋಪಿನಾಥಂ
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ರಾಜ್ಯ ಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಸಂಬಂಧ ಹರ್ಮನ್ ಪ್ರೀತ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ದಸರಾ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸುವಂತೆ ಕೋರಿದೆ. ಇದಕ್ಕೆ ಹರ್ಮನ್ ಪ್ರೀತ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಅ. ೩ರಿಂದ ೬ರವರೆಗೆ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಅ. ೩ರಂದು ಸಂಜೆ ೪. ೩೦ಕ್ಕೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುವಿನ ಕೈಯಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸುವುದು ವಾಡಿಕೆ. ಆದರೆ, ಕಳೆದ ವರ್ಷ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಕ್ರೀಡಾಪಟು ಬದಲಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಳೆದ ವರ್ಷ ಕ್ರೀಡಾಪಟು ಇಲ್ಲದೆ ದಸರಾ ಕ್ರೀಡಾಕೂಟ ಉದ್ಘಾಟನೆ ಆಗಿರುವುದರಿಂದ ಕ್ರೀಡಾ ಪ್ರೇಮಿಗಳಲ್ಲಿ ಬೇಸರ ತರಿಸಿತ್ತು. ಈ ಬಾರಿ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರು ಅತಿಥಿಗಳಾಗಿ ಆಗಮಿಸುತ್ತಿರುವುದು ಕ್ರೀಡಾ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರಿಗೆ ರಾಜ್ಯ ಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲು ಪತ್ರ ರವಾನಿಸಲಾಗಿದೆ. ಬರುವ ಒಪ್ಪಿಗೆ ಸೂಚಿಸಿದ್ದಾರೆ.
-ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

ಈವರೆಗೆ ದಸರಾ ಕ್ರೀಡಾಕೂಟ ಉದ್ಘಾಟಿಸಿದ್ದ ಕ್ರೀಡಾಪಟುಗಳು
ಕೊರೊನಾ ಕಾರಣದಿಂದ ೨೦೨೦ ಹಾಗೂ ೨೦೨೧ನೇ ಸಾಲಿನಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿರಲಿಲ್ಲ. ೨೦೨೨ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ೨೦೧೯ರಲ್ಲಿ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು, ೨೦೧೮ರಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಕೊಡಗಿನ ಎಂ. ಆರ್. ಪೂವಮ್ಮ, ೨೦೧೭ರಲ್ಲಿ ಹೆಸರಾಂತ ಮಹಿಳಾ ಕ್ರಿಕೆಟ್‌ಪಟುಗಳಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್, ೨೦೧೪ ರಲ್ಲಿ ಪರ್ವತಾರೋಹಿ ಅರುಣಿಮಾ ಸಿನ್ಹಾ ಉದ್ಘಾಟಿಸಿದ್ದರು.

 

Tags: