Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಮಸ್ಯೆ ಇದ್ದರೆ ಚಿತ್ರ ಮುಗಿಯುವುದಕ್ಕೆ ಹೇಗೆ ಸಾಧ್ಯ?: ‘ಮ್ಯಾಕ್ಸ್’ ಕುರಿತು ಸುದೀಪ್‍ ಪ್ರಶ್ನೆ

ಕಳೆದ ಡಿಸೆಂಬರ್‍ನಲ್ಲೇ ಸಾಧ್ಯವಾದಷ್ಟು ‘ಮ್ಯಾಕ್ಸ್’ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು ಸುದೀಪ್‍. ಆ ನಂತರ ಬಿಡುಗಡೆ ಏಪ್ರಿಲ್‍ಗೆ ಹೋಯಿತು. ಇನ್ನೊಂದು ಸಮಾರಂಭದಲ್ಲಿ ಸಿಕ್ಕಾಗ, ಬಹುಶಃ ಆಗಸ್ಟ್ನಲ್ಲಿ ಬಿಡುಗಡೆ ಎಂದು ಸುದೀಪ್‍ ಹೇಳಿದ್ದರು. ಈಗ ಸೆಪ್ಟೆಂಬರ್‍ ಮುಗಿಯುತ್ತಾ ಬಂದರು ‘ಮ್ಯಾಕ್ಸ್’ ಸುದ್ದಿಯೇ ಇಲ್ಲ.

ಇಷ್ಟಕ್ಕೂ ‘ಮ್ಯಾಕ್ಸ್’ ಯಾಕೆ ಮುಗಿಯುತ್ತಿಲ್ಲ? ಹೊರಗೆ ಸೋಷಿಯಲ್‍ ಮೀಡಿಯಾದಲ್ಲಿ ಈ ವಿಷಯವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಮೂಲಗಳ ಪ್ರಕಾರ, ನಿರ್ಮಾಪಕ ಕಲೈಪುಲಿ ಎಸ್‍. ಧನು ಮತ್ತು ಚಿತ್ರತಂಡದವರ ನಡುವೆ ಸಂಬಂಧ ಹಳಸಿದೆಯಂತೆ. ಚಿತ್ರ ಪ್ರಾರಂಭವಾಗುವುದಕ್ಕೂ ಮೊದಲು ಅವರೊಂದು ಬಜೆಟ್‍ ಕೊಟ್ಟಿದ್ದರಂತೆ. ಬಜೆಟ್‍ ಹೆಚ್ಚಾಗಿದ್ದಷ್ಟೇ ಅಲ್ಲ, ಚಿತ್ರವೂ ಸಾಕಷ್ಟು ವಿಳಂಬವೂ ಆಗಿದೆ. ಹಾಗಾಗಿ, ಅವರು ತಾವು ಕಮಿಟ್‍ ಆದ ದುಡ್ಡು ಕೊಟ್ಟು, ಮಿಕ್ಕಿದ್ದು ಹೊಂದಿಸಿಕೊಳ್ಳಿ ಎಂದು ಹೇಳಿದ್ದಾರಂತೆ. ಚಿತ್ರದ ಸ್ಯಾಟಿಲೈಟ್‍ ಹಾಗೂ ಡಿಜಿಟಲ್‍ ಹಕ್ಕುಗಳು ಮಾರಾಟವಾಗದಿರುವುದರಿಂದ, ಹೆಚ್ಚಿನ ಹಣ ಸಿಗದೇ ಚಿತ್ರವನ್ನು ಮುಂದುವರೆಸಲಾಗುತ್ತಿಲ್ಲ ಎಂಬೆಲ್ಲಾ ಕಥೆಗಳು ಕೇಳಿಬರುತ್ತಿವೆ. ಅದೇ ಕಾರಣಕ್ಕೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬ ಮಾತೂ ಇದೆ.

ಈ ಕುರಿತು ‘ಬಿಗ್‍ ಬಾಸ್‍ 11’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸುದೀಪ್‍, ತಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ‘ನಿರ್ಮಾಣ ಸಂಸ್ಥೆ ತಮಿಳುನಾಡಿದು. ಅವರಿಗೆ ಅವರದ್ದೇ ಆದಂತಹ ಕೆಲವು ಸಮಸ್ಯೆಗಳಿವೆ. ನನ್ನ ಕಡೆಯಿಂದ ಏನಾಗಬೇಕೋ ಅದನ್ನು ಮುಗಿಸಿ ಕೊಟ್ಟಿದ್ದೇನೆ. ಪ್ಯಾನ್‍ ಇಂಡಿಯಾ ಚಿತ್ರವಾದ್ದರಿಂದ ಸ್ವಲ್ಪ ತಡವಾಗುತ್ತಿದೆ. ಅದನ್ನು ಹೊರತುಪಡಿಸಿದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಚಿತ್ರ ಮುಗಿದಿದೆ. ನಾನು ಸಹ ಈ ಚಿತ್ರಕ್ಕೆ ಪಾಲುದಾರ. ಪಾಲುದಾರರ ಮಧ್ಯೆ ಸಮಸ್ಯೆ ಇದ್ದರೆ ಚಿತ್ರ ಹೇಗೆ ಮುಗಿಯುವುದಕ್ಕೆ ಸಾಧ್ಯ?’ ಎಂಬುದು ಅವರ ಪ್ರಶ್ನೆ.

‘ಮ್ಯಾಕ್ಸ್’ ನಿಂತಿರುವ ಬಗ್ಗೆ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ಕುರಿತು ಮಾತನಾಡಿದ ಅವರು, ‘ನೆಗೆಟಿವಿ ಪ್ರಚಾರ ಸಹ ಪ್ರಚಾರವೇ. ಅವರು ಸಹ ದುಡ್ಡ ಹಾಕಿದ್ದಾರೆ. ಸಿನಿಮಾ ಹೊರಗೆ ಬಂದರೆ ಅವರಿಗೂ ದುಡ್ಡು ಬರುತ್ತದೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳಿವೆ ಮತ್ತು ಅದನ್ನು ನಾವು ಒಪ್ಪಿಕೊಳ್ಳಬೇಕು. ಇಲ್ಲಿ ಬೇರೆ ಏನೂ ಇಲ್ಲ. ಇಡೀ ಚಿತ್ರವನ್ನೇ ಒಟ್ಟಿಗೆ ನಡೆಸಿಕೊಂಡು ಬಂದಿದ್ದೇವೆ. ಸಿನಿಮಾ ನಿಂತು ಹೋಗಿದ್ದರೆ, ಇಷ್ಟು ದೂರ ಸಾಗಿಬರುವುದಕ್ಕೆ ಸಾಧ್ಯವೇ ಇರಲಿಲ್ಲ’ ಎಂದರು.

‘ಮ್ಯಾಕ್ಸ್’ ಚಿತ್ರವನ್ನು ವಿ ಕ್ರಿಯೇಷನ್ಸ್ ಬ್ಯಾನರ್‍ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್‍ ಚಂದ್ರ ಛಾಯಾಗ್ರಹಣವಿದೆ.

Tags: