Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ದಿಕ್ಕು ಬದಲಾಯಿಸುತ್ತಿವೆ ಕೌಟುಂಬಿಕ ಉಳಿತಾಯಗಳು

ಪ್ರೊ. ಆರ್. ಎಂ. ಚಿಂತಾಮಣಿ

ಕುಟುಂಬಗಳು ತಮ್ಮ ಆದಾಯಗಳಲ್ಲಿ ಅವಶ್ಯಕ ವೆಚ್ಚಗಳನ್ನು ನಿಭಾಯಿಸಿದ ನಂತರ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳುವುದು ಸ್ವಾಭಾವಿಕ. ಈ ಭಾಗವನ್ನೇ ಆರ್ಥಿಕ ಪರಿಭಾಷೆಯಲ್ಲಿ ಉಳಿತಾಯಗಳು ಎಂದು ಕರೆಯಲಾಗುವುದು. ಎಲ್ಲ ಕುಟುಂಬಗಳೂ ಈ ವಿಷಯದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲೇ ಬೇಕು.

ಭವಿಷ್ಯತ್ತಿನಲ್ಲಿ ಹೆಚ್ಚುತ್ತಲೇ ಹೋಗುವ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳಲು ಉಳಿತಾಯಗಳ ಅವಶ್ಯಕತೆ ಇದೆ. ನಾಳಿನ ಭದ್ರತೆ (ಇಳಿವಯಸ್ಸಿನ ಭದ್ರತೆಯೂ ಸೇರಿ), ಮನೆ, ವಾಹನ, ಭೂಮಿ ಮತ್ತು ಇತರೆ ಬೆಲೆಬಾಳುವ ಮತ್ತು ಬದುಕನ್ನು ಉತ್ತಮಪಡಿಸುವ ಆಸ್ತಿಗಳನ್ನು ಹೊಂದುವುದು, ಕೌಟುಂಬಿಕ ವಿಸ್ತರಣೆಗಳಾದಾಗ ಮಕ್ಕಳ ಶಿಕ್ಷಣ, ಮದುವೆ ಮುಂತಾದ ವೆಚ್ಚಗಳಿಗಾಗಿ ಹಣ ಕೂಡಿಡುವುದು ಮತ್ತು ಆಪದ್ಧನವಾಗಿ ಒಂದಿಷ್ಟು ಹಣವನ್ನು ಆರೋಗ್ಯ ಸಮಸ್ಯೆಗಳಂಥ ಅನಿರೀಕ್ಷಿತ ಖರ್ಚುಗಳಿಗಾಗಿ ಮತ್ತು ಆಕಸ್ಮಿಕ ವೆಚ್ಚಗಳಿಗಾಗಿ ಕಾಪಿಡುವುದು ಮುಂತಾದವುಗಳನ್ನು ಸಾಮಾನ್ಯವಾಗಿ ಉಳಿತಾಯಗಳ ಕೌಟುಂಬಿಕ ಉದ್ದೇಶಗಳೆಂದು ಹೇಳಬಹುದು.

ಕೈಸಾಲವೂ ಸೇರಿ ಬೇರೆ ಬೇರೆ ಮೂಲಗಳಿಂದ ಸಾಲಗಳನ್ನು ಪಡೆದಿದ್ದರೆ ಅವುಗಳನ್ನು ತೀರಿಸುವುದು ಮತ್ತು ಬಡ್ಡಿ ಪಾವತಿಸುವುದೂ ಉಳಿತಾಯಗಳ ಒಂದು ಉದ್ದೇಶವಾಗುತ್ತದೆ. ಎಲ್ಲ ವರ್ಗಗಳ ಕುಟುಂಬಗಳು ತಮ್ಮ ಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು ಮತ್ತು ಕೌಟುಂಬಿಕ ಆದಾಯ ವೆಚ್ಚಗಳಿಗೆ ತಕ್ಕಂತೆ ಉಳಿತಾಯಗಳನ್ನು ಮಾಡಲೇಬೇಕು. ಮಾಡುತ್ತವೆ. ಈ ಉಳಿತಾಯಗಳನ್ನು ಯಾವ ರೂಪದಲ್ಲಿಡಬೇಕೆಂಬುದು ಮುಂದಿನ ಪ್ರಶ್ನೆ. ಇದೇ ಹೂಡಿಕೆ ನಿರ್ಧಾರ. ನಗದು ಇಟ್ಟುಕೊಳ್ಳಬಹುದು. ಬ್ಯಾಂಕುಗಳಲ್ಲಿ ಕರೆಂಟ್, ಸೇವಿಂಗ್ಸ್ ಬ್ಯಾಂಕ್ ಮತ್ತು ಸಾವಽ ಠೇವಣಿ ಖಾತೆಗಳಲ್ಲಿಡಬಹುದು. ಬ್ಯಾಂಕೇತರ ಹಣಕಾಸು ಕಂಪೆನಿಗಳಲ್ಲಿ ಠೇವಣಿ ಇಡಬಹುದು. ಷೇರು, ಬಾಂಡು ಪೇಟೆಗಳಲ್ಲಿ ಹೂಡಿಕೆ ಮಾಡಬಹುದು. ತಾವೇ ಸಾಲ ಕೊಡಬಹುದು. ಉಳಿತಾಯಗಳ ಉದ್ದೇಶಗಳನ್ನು ಆಧರಿಸಿ ಹೂಡಿಕೆ ನಿರ್ಧಾರಗಳು ಬದಲಾಗುತ್ತವೆ. ಇಲ್ಲಿ ದ್ರವ್ಯತೆ (ನಗದೀಕರಣ ಸಾಧ್ಯತೆ), ಸುರಕ್ಷಿತತೆ (ನಷ್ಟ ಭಯದ ನಿರ್ವಹಣೆ) ಮತ್ತು ಉತ್ಪಾದಕತೆ (ಆದಾಯ ಅಥವಾ ಲಾಭದ ಪ್ರಮಾಣ) ತತ್ವಗಳನ್ನು ಪಾಲಿಸಬೇಕಾಗುತ್ತದೆ.

ಆಪದ್ಧನದ ಭಾಗವನ್ನು ನಗದು ರೂಪದಲ್ಲಿ ಮತ್ತು ಕೂಡಲೇ ನಗದೀಕರಿಸಬಹುದಾದ ಬ್ಯಾಂಕ್ ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಬ್ಯಾಂಕ್ ಖಾತೆಗಳಲ್ಲಿ ಇಡಬಹುದು. ಇಲ್ಲಿ ಲಾಭ ಮಹತ್ವದ್ದಲ್ಲ. ಅವಶ್ಯಕತೆ ಬಿದ್ದಾಗ ನಗದು ಹಣ ದೊರಕಿದರೆ ಸಾಕು. ಎಸ್‌ಬಿ ಖಾತೆಯಲ್ಲಿ ಸ್ವಲ್ಪ ಬಡ್ಡಿ ಬಂದರೆ ಅದೇ ಹೆಚ್ಚು. ಉಳಿದಂತೆ ದೀರ್ಘಾವಽ ಉಳಿತಾಯಗಳನ್ನು ಭದ್ರತೆ ಮತ್ತು ಲಾಭದ ಸಾಧ್ಯತೆಗಳನ್ನು ಆಧರಿಸಿ ನಿಗದಿತ ಅವಽಗಳ ಹೂಡಿಕೆಗಳನ್ನು ಮಾಡಲಾಗು ತ್ತದೆ. ಇಲ್ಲಿಯೂ ಎಚ್ಚರಿಕೆ ಅವಶ್ಯ. ಹೆಚ್ಚು ಲಾಭದ (ಬಡ್ಡಿಯ) ಆಸೆಯಿಂದ ಮೂಲಧನವೇ ಹೋದರೆ ಕಷ್ಟ. ಷೇರುಪೇಟೆ ಕಡೆಗೆ ಹೆಚ್ಚಿದ ಒಲವು : ೨೦೨೦ರವರೆಗೆ ಕೌಟುಂಬಿಕ ಉಳಿತಾಯಗಳ ಬಹುಭಾಗ ಬ್ಯಾಂಕ್ ಠೇವಣಿಗಳಿಗೇ ಹೋಗುತ್ತಿತ್ತು. ಆಪದ್ಧನದ ಸ್ವಲ್ಪ ಭಾಗ ಕರೆಂಟ್ ಮತ್ತು ಎಸ್‌ಬಿ ಖಾತೆಗಳಲ್ಲೂ ದೀರ್ಘಾವಧಿ ಉಳಿಕೆಗಳಲ್ಲಿ ದೊಡ್ಡ ಪಾಲು ಬ್ಯಾಂಕ್ ಎಫ್‌ಡಿಗಳಲ್ಲೂ ಇಡಲ್ಪಡುತ್ತಿದ್ದವು. ಉಳಿದ ಸಣ್ಣ ಭಾಗ ಇತರೆ ಮಾರ್ಗಗಳನ್ನು ಹುಡುಕುತ್ತಿತ್ತು. ಆಗ ಬ್ಯಾಂಕೇತರ ಹಣಕಾಸು ಕಂಪೆನಿಗಳು ಈಗಿನಷ್ಟು ಪ್ರಬಲವಾಗಿರಲಿಲ್ಲ.

ಆಗ ದೊಡ್ಡ ನಗರಗಳಲ್ಲಿ ಹಣಕಾಸು ಪೇಟೆಗಳ ಪೂರ್ಣ ಮಾಹಿತಿ ಇದ್ದ ಕೆಲವರು ಮಾತ್ರ ಷೇರು ಪೇಟೆಯಲ್ಲಿ ತೊಡಗಿಸುತ್ತಿದ್ದರು. ಕೋವಿಡ್-೧೯ ಸಾಂಕ್ರಾಮಿಕ ರೋಗದ ಅವಽಯಲ್ಲಿ ರಿಸರ್ವ್ ಬ್ಯಾಂಕ್ ನೀತಿ ಬಡ್ಡಿದರಗಳು (ರೆಪೊ, ರಿಸರ್ವ್ ರೆಪೊ ಮತ್ತು ಬ್ಯಾಂಕ್ ದರ) ತೀರಾ ಕೆಳಮಟ್ಟಕ್ಕಿಳಿದಿದ್ದರಿಂದ ಬ್ಯಾಂಕುಗಳಲ್ಲಿಯ ಠೇವಣಿ ದರಗಳೂ ಕುಸಿದಿದ್ದವು. ಹೆಚ್ಚು ಲಾಭದಾಯಕ ಮಾರ್ಗಗಳನ್ನು ಉಳಿತಾಯಗಳು ಹುಡುಕುತ್ತಿದ್ದವು. ಅದೇ ಸಮಯದಲ್ಲಿ ಹಣಕಾಸು ಪೇಟೆಗಳಲ್ಲಿ ಷೇರು ಮತ್ತು ಬಾಂಡುಗಳ ಬೆಲೆಗಳು ವೇಗವಾಗಿ ಏರುತ್ತಿದ್ದವು.

ಅಲ್ಲದೆ ಜನರಲ್ಲಿ ಹಣಕಾಸು ಪೇಟೆಗಳ ಅರಿವು ಹೆಚ್ಚಾಗುತ್ತಿದ್ದು, ಹಳ್ಳಿ ಪಟ್ಟಣಗಳಿಗೂ ಷೇರುಪೇಟೆಗಳ ಮಾಹಿತಿ ವೇಗವಾಗಿ ವಿಸ್ತರಣೆಯಾಗತೊಡಗಿತ್ತು. ಹೀಗಾಗಿ ಉಳಿತಾಯಗಳನ್ನು ಹೊಂದಿದವರು ಷೇರುಪೇಟೆಗಳ ಕಡೆಗೆ ಮುಖ ಮಾಡತೊಡಗಿದರು. ೨೦೨೪ರ ಆರಂಭದಲ್ಲಿ ಇದು ಇನ್ನೂ ಹೆಚ್ಚಾಯಿತು. ಇತ್ತೀಚಿನ ದಶಕಗಳಲ್ಲಿ ಮ್ಯೂಚುವಲ್ ಫಂಡುಗಳೆಂಬ ಟ್ರಸ್ಟ್‌ಗಳೂ ಖಾಸಗಿ ಇಕ್ವಿಟಿ ಫಂಡುಗಳೂ ಷೇರುಪೇಟೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೇರವಾಗಿ ಅಲ್ಲದೆ ಇವುಗಳ ಮೂಲಕವೂ ವ್ಯವಹರಿಸಬಹುದು. ಮ್ಯೂಚುವಲ್ ಫಂಡುಗಳು ಟ್ರಸ್ಟ್‌ಗಳಾಗಿದ್ದು, ಲಾಭ ಗಳಿಸುವುದಿಲ್ಲ. ಸದಸ್ಯರಿಂದ ಪಡೆದ ಹೂಡಿಕೆಗಳನ್ನು ಪೇಟೆಯಲ್ಲಿ ವ್ಯವಹರಿಸುವ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಗಳಿಗೆ ಕರಾರುಗಳೊಡನೆ ವಹಿಸುತ್ತವೆ. ಬಂದ ಆದಾಯದಲ್ಲಿ ತನ್ನೆಲ್ಲ ಖರ್ಚುಗಳನ್ನು ಕಳೆದು ಉಳಿದುದ್ದನ್ನು ಸದಸ್ಯರಿಗೆ ಪ್ರಮಾಣಬದ್ಧವಾಗಿ ಲಾಭಾಂಶವೆಂದು ಹಂಚುತ್ತವೆ. ಷೇರುಪೇಟೆಯ ಬೆಲೆಗಳು ದಿನೇ ದಿನೇ ವೇಗವಾಗಿ ಹೆಚ್ಚುತ್ತಿರುವುದು ಮತ್ತು ಬೆಲೆ ಸೂಚ್ಯಂಕಗಳು ಮೇಲೇರುತ್ತಲೇ ಇರುವುದು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.

ಉಳಿತಾಯಗಳು ಅತ್ತ ಹೆಚ್ಚು ಹರಿದು ಹೋಗಲು ಇದೂ ಒಂದು ಕಾರಣ. ಇತ್ತೀಚಿನ ಬ್ರೋಕಿಂಗ್ ಕಂಪೆನಿಯೊಂದರ ಸಂಶೋಧನಾ ವರದಿ ಇದನ್ನು ಪುಷ್ಟೀಕರಿಸುತ್ತದೆ. ಈ ಎಲ್ಲ ಮಾರ್ಗಗಳಿಂದ ಷೇರುಪೇಟೆ ಕಡೆಗೆ ಹರಿಯುವ ಹೂಡಿಕೆಗಳು (ಉಳಿತಾಯಗಳು) ೨೦೨೦ರಲ್ಲಿ ಒಟ್ಟು ಉಳಿತಾಯಗಳ ಶೇ. ೧೫ರಷ್ಟಿದ್ದದು ೨೦೨೪ರ ಹೊತ್ತಿಗೆ ಶೇ. ೨೫ಕ್ಕೆ ಏರಿವೆ. ಆದರೆ ಇದೇ ಅವಽಯಲ್ಲಿ ಬ್ಯಾಂಕ್ ಠೇವಣಿಗಳ ಪಾಲು ಶೇ. ೫೩ರಿಂದ ಶೇ. ೪೨ಕ್ಕೆ ಇಳಿದಿದೆ. ಇದು ಗಣನೀಯ ಬದಲಾವಣೆಯನ್ನು ಸೂಚಿಸುತ್ತದೆ. ಇದಲ್ಲದೆ ಕುಟುಂಬಗಳು ಪೆನ್ಶನ್ ಫಂಡುಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಶೇ. ೧೦ರಿಂದ ಶೇ. ೧೨ಕ್ಕೆ ಹೆಚ್ಚಾಗಿದೆ. ಕುಟುಂಬಗಳು ವಿಮೆ ರಕ್ಷಣೆಯ ಬಗ್ಗೆ ಜಾಗೃತವಾಗುತ್ತಿದ್ದು, ಆರೋಗ್ಯ ಜೀವ ವಿಮೆಗಳಲ್ಲದೆ ಆಸ್ತಿ ಮತ್ತು ಅಪಘಾತ ವಿಮೆ ರಕ್ಷಣೆಗಳನ್ನೂ ಪಡೆಯುತ್ತಿವೆ. ಇದಕ್ಕಾಗಿ ೨೦೨೪ರಲ್ಲಿ ತಮ್ಮ ಉಳಿತಾಯಗಳ ಶೇ. ೨೧ರಷ್ಟು ವ್ಯಯಿಸುತ್ತಿದ್ದಾರೆ. ವಿಮೆ ಕಂಪೆನಿಗಳ ಮತ್ತು ಪೆನ್ಶನ್ ಫಂಡುಗಳ ಮೂಲಕವೂ ಹೆಚ್ಚು ಉಳಿತಾಯಗಳು ಷೇರುಪೇಟೆಗೆ ಹರಿಯುತ್ತಿವೆ. ಹೀಗಾಗಿ ಹೆಚ್ಚು ಕುಟುಂಬಗಳು ಉಳಿತಾಯ ಮಾಡುವವರಾಗಿ ಉಳಿಯದೇ ಹೂಡಿಕೆದಾರರಾಗುತ್ತಿರುವುದನ್ನು ಗಮನಿಸಬಹುದು.

ಹೆಚ್ಚು ಲಾಭದ ಕಡೆಗೆ ಹೋಗುತ್ತಿರುವುದೇನೋ ಸರಿ. ಆದರೆ ಷೇರುಪೇಟೆಯ ಒಳಹೊರಗುಗಳನ್ನು ಪೂರ್ಣವಾಗಿ ಅಲ್ಲದಿದ್ದರೂ ಅತಿ ಹೆಚ್ಚು ಮಾಹಿತಿಗಳನ್ನು ಪಡೆದು ಕುಟುಂಬಗಳು ತಾವು ಕಷ್ಟಪಟ್ಟು ದುಡಿದು ಉಳಿಸಿದ್ದನ್ನು ಅದರಲ್ಲಿ ತೊಡಗಿ ಸಲು ಮುಂದಿನ ಹೆಜ್ಜೆ ಇಡಬೇಕು. ಷೇರುಪೇಟೆಯ ಅಂತರಂಗದಲ್ಲಿ ಹಲವು ತಂತ್ರ ಕುತಂತ್ರಗಳು ಹುದುಗಿರುತ್ತವೆ. ಅವುಗಳನ್ನೆಲ್ಲ ಭೇದಿಸಿ ಪ್ರತಿ ತಂತ್ರಗಳೊಂದಿಗೆ ಮುನ್ನಡೆಯುವವರು ಮಾತ್ರ ಅಲ್ಲಿ ಬದುಕುತ್ತಾರೆ. ಅಲ್ಲಿ ಭದ್ರತೆಯ ಅಂಶ ತೀರಾ ಕಡಿಮೆ. ಇಲ್ಲವೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ೧೯೯೧-೯೨ರಲ್ಲಿಯ ಹರ್ಷದ್ ಮೆಹತಾ ಹಗರಣದಂತಹ ಹಗರಣಗಳು (ಸಣ್ಣ ದೊಡ್ಡ) ನಡೆಯುತ್ತಿರುವ ವರದಿಗಳು ಬರುತ್ತಲೇ ಇರುತ್ತವೆ. ಎಚ್ಚರ. ಒಂದು ಮಾತು: ಸಾಮಾನ್ಯ ಕುಟುಂಬಗಳು ಹೂಡಿಕೆಯ ಮೂರು ತತ್ವಗಳಾದ ದ್ರವ್ಯತೆ, ಲಾಭದಾಯಕತೆ ಮತ್ತು ಎಲ್ಲಕ್ಕೂ ಹೆಚ್ಚಾಗಿ ಸುರಕ್ಷತತೆಗಳನ್ನಾಧರಿಸಿ ತಮ್ಮ ಉಳಿತಾಯಗಳನ್ನು ವಿವಿಧ ಹೂಡಿಕೆಗಳಲ್ಲಿ ವಿಂಗಡಿಸಬೇಕು. ಸಣ್ಣಭಾಗ ಷೇರುಗಳಲ್ಲೂ ಇರಲಿ.

 

Tags: