Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಹೊಸಪೇಟೆ: ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಸಂಪೂರ್ಣ ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ರೊಡನೆ ಬಾಗಿನ ಅರ್ಪಿಸಿದರು.

ರಾಜ್ಯದಲ್ಲಿ ತುಂಗಾಭದ್ರ ಜಲಾಶಯವನ್ನು ಆಶ್ರಯಿಸಿ 13 ಲಕ್ಷ ಎಕರೆ ಜಮೀನಿಗೂ ಹೆಚ್ಚು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿತ್ತು. ಅಲ್ಲದೆ ಈ ಜಲಾಶಯದಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ನೀರು ಪೂರೈಕೆಯಾಗುತ್ತಿತ್ತು.

ಇದೀಗ ಜಲಾಶಯ ಭರ್ತಿಯಾಗಿರುವುದರಿಂದ ಬೆಳೆಗೆ ನೀರು ಲಭಿಸುವುದು ಬಹುತೇಕ ಖಚಿತವಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು, ತುಂಗಭದ್ರೆಗೆ ಬಾಗಿನ ಅರ್ಪಿಸಿದ್ದಾರೆ. ಇದರಿಂದ ನೆರೆ ರಾಜ್ಯಗಳಿಗೂ ಒಳ್ಳೆಯ ಸಂದೇಶ ರವಾನೆಯಾದಂತಾಗಿದೆ.

ಈ ವರ್ಷದ ಮುಂಗಾರು ಪ್ರಾರಂಭದಲ್ಲೇ ಉತ್ತಮವಾಗಿದ್ದರಿಂದ ಜುಲೈ ಕೊನೆಯ ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ ಆ.6ರಂದೇ ತುಂಗಭದ್ರೆಗೆ ಬಾಗಿನ ಅರ್ಪಿಸಲು ದಿನ ನಿಗಧಿಯಾಗಿತ್ತು. ಆದರೆ, ಆ ವೇಳೆ ರಾಜ್ಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರ ಅಲ್ಲಲ್ಲಿ ಸಮಾವೇಶಗಳನ್ನು ಆಯೋಜಿಸಿದ್ದರಿಂದ ಅದರಲ್ಲಿ ಪಾಲ್ಗೊಂಡಿದ್ದ ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಈ ಕಾರ್ಯಕ್ರಮಕ್ಕೆ ಗೈರಾಗುವುದು ಅನಿವಾರ್ಯವಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಮುಂದೂಡಿದ್ದರು.

ನಂತರ ಆ.13 ರಂದು ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ, ಆ.10ರ ರಾತ್ರಿ 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋದ ಕಾರಣ ಆ ದಿನವೂ ಸಹ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದನ್ನು ವೀಕ್ಷಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಮಿಸಿ, ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ನೂತನ ಗೇಟ್‌ ಅಳವಡಿಸಲು ಸೂಚಿಸಿದರು.

ತಜ್ಞರು ಹಾಗೂ ಸಿಬ್ಬಂದಿಯ ಸಂಪೂರ್ಣ ಪ್ರಯತ್ನದಿಂದ ವಾರದೊಳಗೆ ತಾತ್ಕಾಲಿಕ ಗೇಟ್‌ನ್ನು ಅಳವಡಿಸಲಾಗಿತ್ತು. ಇದರಿಂದ ತುಂಗಾಭದ್ರಾ ನದಿಯ ನೀರು 30 ಟಿಎಂಸಿಯಷ್ಟು ಪೋಲಾಗುವುದನ್ನು ತಪ್ಪಿಸಲಾಗಿತ್ತು. ಇದೀಗ ಪುನಃ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿ ಜಲಾಶಯ ತುಂಬಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಾಗಿನ ಅರ್ಪಿಸಿದ್ದಾರೆ.

Tags: