ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದು, ಹೊರಗೆ ಬಂದ ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್‌ಗೆ ಈಗ ಹತ್ಯೆ ಬಗ್ಗೆ ಪಶ್ಚಾತ್ತಾಪ ಕಾಡುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಜೈಲು ಸಿಬ್ಬಂದಿಯೊಬ್ಬರ ಬಳಿ ಮಾತನಾಡಿರುವ ದರ್ಶನ್, ಇಲ್ಲಿಂದ ಹೊರಗಡೆ ಹೋದ ಮೇಲೆ ಮೊದಲು ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡುತ್ತೇನೆ. ಅವರಿಗೆ ಸಹಾಯ ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನದು ಸಾಯಿಸುವ ಮನಸ್ಸಲ್ಲ. ನಾನಂತೂ ರೇಣುಕಾಸ್ವಾಮಿಯನ್ನು ಕೊಲೆ ಮಾಡಿಲ್ಲ ಎಂದು ಹೇಳಿರುವ ಅವರು, ಪತ್ನಿ ವಿಜಯಲಕ್ಷ್ಮೀ ಜೊತೆಗೂ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಇನ್ನು ದರ್ಶನ್ ಅವರು, ಬಳ್ಳಾರಿ ಜೈಲಿನಲ್ಲಿ ಕಳೆದ ಮೂರು ದಿನಗಳಿಂದ ತುಂಬಾ ಸಂತೋಷದಲ್ಲಿದ್ದಾರೆ ಎನ್ನಲಾಗಿದ್ದು, ಎಲ್ಲರ ಜೊತೆಗೆ ತುಂಬಾ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಜೈಲಿನಲ್ಲಿ ತಲೆದಿಂಬು, ಬೆಡ್ ಹಾಗೂ ಚೇರ್‌ಗೆ ದರ್ಶನ್ ಬೇಡಿಕೆ ಇಟ್ಟಿದ್ದು, ಅಧಿಕಾರಿಗಳು ಇದನ್ನು ಕೊಡಲು ನಿರಾಕರಿಸಿದ್ದಾರೆ.