ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪವಾಡ ಪುರುಷ ನೆಲೆಸಿರುವ ಪ್ರಸಿದ್ಧ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಪ್ರವೇಶಕ್ಕೆ ಅರಣ್ಯ ಇಲಾಖೆ ಬಿಗ್ ಪ್ಲಾನ್ ರೂಪಿಸಿದೆ.
ನಾಗಮಲೆ ಪ್ರವೇಶಕ್ಕೆ ಅರಣ್ಯ ಇಲಾಖೆಯು ಇನ್ನುಮುಂದೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ಕೈಗೊಂಡಿರುವುದು ಸಾರ್ವಜನಿಕರು ಹಾಗೂ ಚಾರಣ ಪ್ರಿಯರಿಗೆ ಸಂತಸ ತಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ನಾಗಮಲೆ ಕ್ಷೇತ್ರದ ಪಾವಿತ್ರ್ಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿ ಎಲ್ಲರೂ ಸ್ವಚ್ಛತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರ ಪ್ರೇಮಿಗಳು, ನಾಗಮಲೆ ಕ್ಷೇತ್ರ ಭಕ್ತಿ ಸಮರ್ಪಣೆಗೆ ಮೀಸಲಾಗಿದೆ. ಇಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟ ಮಾಡಬಾರದು. ಈ ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹದ್ದಿನ ಕಣ್ಣಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ಚಾರಣ ಪ್ರದೇಶಗಳಿಗೆ ಪ್ರವಾಸಿಗರ ನಿರ್ಬಂಧ ಹೇರಿದ್ದ ಬೆನ್ನಲ್ಲೇ ನಾಗಮಲೆಗೂ ಪ್ರವೇಶ ನಿರ್ಬಂಧಿಸಲಾಗಿತ್ತು.
ಇದೀಗ ನಾಗಮಲೆಗೆ ಸಾರ್ವಜನಿಕರ ಪ್ರವೇಶಕ್ಕೆ ಪದೇ ಪದೇ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿ ಮಾಡಲು ಕ್ರಮ ಕೈಗೊಂಡಿದ್ದು, ಚಾರಣಿಗರಿಗೆ ಭಾರೀ ಸಂತಸವಾಗಿದೆ.