Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಶಾಸಕ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿದ ಮಾಜಿ ಶಾಸಕ ಆರ್.ನರೇಂದ್ರ

ಹನೂರು: ಒಕ್ಕಲಿಗ ಹಾಗೂ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಿಜೆಪಿ ಶಾಸಕ ಮುನಿರತ್ನ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಒತ್ತಾಯಿಸಿದ್ದಾರೆ.

ಈ ಕುರಿತು ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜ್ಞಾನ ಇಲ್ಲದೆ ಇರುವ ಅವಿದ್ಯಾವಂತನು ಕೂಡ ಹೆಣ್ಣು ಮಕ್ಕಳ ವಿರುದ್ಧ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. ಆದರೆ ಶಾಸಕರಾಗಿರುವ ಮುನಿರತ್ನ, ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ನಮ್ಮ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ತಾಯಿಯ ಸ್ಥಾನ ನೀಡಿದ್ದೇವೆ. ಅವರಿಗೆ ಗೌರವ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ಹೆಣ್ಣುಮಕ್ಕಳ ಬಗ್ಗೆ ಗುತ್ತಿಗೆದಾರನ ಜೊತೆ ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ನಿಂದಿಸಿ ಸಂಭಾಷಣೆ ಮಾಡಿರುವುದು ಪ್ರಯೋಗಾಲಯದಲ್ಲಿ ಸಾಬೀತಾದರೆ ಶಾಸಕ ಸ್ಥಾನಕ್ಕೆ ಮುನಿರತ್ನ ರಾಜೀನಾಮೆ ನೀಡಬೇಕು. ಹೆಣ್ಣು ಮಕ್ಕಳ ವಿರುದ್ಧ ಕೆಟ್ಟದಾಗಿ ಮಾತನಾಡಿರುವ ಇವರ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಿ ಇವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಭಾರತಾಂಬೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಬಿಜೆಪಿ ಪಕ್ಷದ ಶಾಸಕರೇ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಇಂತಹ ನಾಚಿಕೆಗೆಟ್ಟ ನಾಯಕರಿಂದ ಬಿಜೆಪಿ ಪಕ್ಷಕ್ಕೂ ಶೋಭೆ ತರುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಆಡಿಯೋವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಧ್ವನಿ ಇವರದ್ದೇ ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದೊಮ್ಮೆ ಆಡಿಯೋ ನಕಲಿಯಾಗಿದ್ದರೆ ಪೊಲೀಸರು ಇದನ್ನು ಹರಿಬಿಟ್ಟವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ಮಾಜಿ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ರಾಜು, ಗೋವಿಂದೇಗೌಡ ಹಾಜರಿದ್ದರು.

Tags: