Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಸರಾ ಚಲನಚಿತ್ರೋತ್ಸವಕ್ಕೆ ಭರ್ಜರಿ ಸಿದ್ಧತೆ

ಐನಾಕ್ಸ್-ಮಲ್ಟಿಫ್ಲೆಕ್ಸ್‌ನಲ್ಲಿ ಅ.೪ರಿಂದ ೧೦ರವರೆಗೆ ಮೂರು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ; ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳ ರಸದೌತಣ.

ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ಸಿನಿಮಾ ಪ್ರಿಯರನ್ನು ರಂಜಿಸುವ ಸಲುವಾಗಿ ದಸರಾ ಚಲನಚಿತ್ರ ಉಪ ಸಮಿತಿ ವತಿಯಿಂದ ಒಂದು ವಾರ ಚಲನಚಿತ್ರೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಸಿನಿಮಾಗಳ ಧಮಾಕ ಶುರುವಾಗಲಿದೆ.

ನಗರದ ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಅ. ೪ರಿಂದ ೧೦ರವರೆಗೆ ಮೂರು ಸ್ಕ್ರೀನ್‌ಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಅತ್ಯುತ್ತಮ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಒಂದೆರಡು ದಿನಗಳಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಸಿನಿಮಾಗಳು, ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ಬಾರಿಯೂ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಂದಿನಂತೆ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಶಾಸಕರು ಭಾಗವಹಿಸಲಿದ್ದಾರೆ.

ಇದರೊಂದಿಗೆ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲು ಸಿನಿಮಾ ನಟರನ್ನು ಆಹ್ವಾನಿಸಲು ಉದ್ದೇಶಿಸಲಾಗಿದ್ದು, ಯಾರನ್ನು ಅತಿಥಿಯಾಗಿ ಆಹ್ವಾನಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕಳೆದ ಬಾರಿಯ ಚಲನಚಿತ್ರೋತ್ಸವ ವೀಕ್ಷಣೆಗೆ ೫೦೦ ರೂ. ಮೊತ್ತದ ಪಾಸ್ ನೀಡಲಾಗಿತ್ತು. ಈ ಬಾರಿ ಪಾಸ್ ದರ ಇನ್ನೂ ನಿರ್ಧಾರವಾಗಿಲ್ಲ. ದರ ನಿಗದಿಯಾದ ನಂತರ ಜನರು ಆನ್‌ಲೈನ್ ಮೂಲಕ ಪಾಸ್‌ಗಳನ್ನು ಪಡೆದುಕೊಳ್ಳಬಹುದು. ದಸರಾ ಚಲನಚಿತ್ರ ಉಪ ಸಮಿತಿ ಆನ್ ಲೈನ್ ಲಿಂಕ್ ಅನ್ನು ಮಾಧ್ಯಮದ ಮೂಲಕ ಬಿಡುಗಡೆ ಮಾಡಲಿದೆ. ಏಳು ದಿನಗಳ ಪಾಸ್ ಪಡೆಯಲು ಆಸಕ್ತಿ ಹೊಂದಿಲ್ಲದೆ ಇರುವವರು ದಿನದ ಪಾಸ್ ಅನ್ನು ಪಡೆದುಕೊಳ್ಳಬಹುದು. ಈ ದಿನದ ಪಾಸ್‌ಗಳು ಐನಾಕ್ಸ್ ಮಲ್ಟಿಫ್ಲೆಕ್ಸ್ ನಲ್ಲಿಯೇ ದೊರೆಯಲಿವೆ.

೨೦೨೨ರಲ್ಲಿ ನಟ ದಿ. ಪುನೀತ್ ರಾಜ್ ಕುಮಾರ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಸಿನಿಮಾಗಳನ್ನು ಹೆಚ್ಚಾಗಿ ಪ್ರದರ್ಶಿಸಲಾ ಯಿತು. ೨೦೨೩ರಲ್ಲಿ ಹಾಸ್ಯನಟ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಅವರ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಬಾರಿ ಯಾವ ಥೀಮ್ ಅಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ದಸರಾ ಚಲಚಿತ್ರೋತ್ಸವ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಅತ್ಯುತ್ತಮವಾಗಿ ಆಯೋಜಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ನಗರದ ಐನಾಕ್ಸ್ ಚಿತ್ರಮಂದಿರದ ಮೂರು ಸ್ಕ್ರೀನ್‌ಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳು ಹಾಗೂ ಕಿರುಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ೨೦ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಿನಿಮಾ ಆಸಕ್ತರು ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಲನ ಚಿತ್ರೋತ್ಸವವನ್ನು ಯಶಸ್ವಿಗೊಳಿಸಬೇಕು. – ಟಿ. ಕೆ. ಹರೀಶ್, ಕಾರ್ಯದರ್ಶಿ, ದಸರಾ ಚಲನಚಿತ್ರೋತ್ಸವ ಸಮಿತಿ

Tags: