ಮೈಸೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಮಂತ್ರಿಗಳು ಸುಮ್ಮನೆ ಭಾಷಣ ಮಾಡುತ್ತಾರೆ ಅಷ್ಟೇ. ಈ ರೀತಿಯ ಘಟನೆ ಆಗಬಾರದಿತ್ತು. ಜಿಲ್ಲೆಯ ಸೂಕ್ಷ್ಮತೆ ಅರ್ಥಾನೇ ಮಾಡಿಕೊಂಡಿಲ್ಲ ಅಂದರೆ ಚಲುವರಾಯಸ್ವಾಮಿ ಯಾವ ಸೀಮೆ ಮಂತ್ರಿ ಎಂದು ಕಿಡಿಕಾರಿದರು.
ಗಲಭೆ ನಡೆಯುವುದಕ್ಕಿಂತ ಮುಂಚೆಯೇ ಎಲ್ಲರನ್ನು ಕರೆದು ಶಾಂತಿಸಭೆ ಮಾಡಬಹುದಿತ್ತು. ಆದರೆ ಚಲುವರಾಯಸ್ವಾಮಿ ಮಾಡಿದ್ದೇನು ಎಂದು ವಾಗ್ದಾಳಿ ನಡೆಸಿದರು.
ನಾಗಮಂಗಲದಲ್ಲಿ ನಡೆದ ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲನೇ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ದರು. ಎರಡನೇ ಅವಧಿಯಲ್ಲಿ ಭ್ರಷ್ಟರ ಧ್ವನಿ ಆಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.