ಕಳೆದ ಮೂರು ತಿಂಗಳಿನಿಂದಲೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಆದರೆ ಈಗ ಜೈಲು ವಾಸ ಅನುಭವಿಸುತ್ತಿರುವಾಗಲೇ ಒಂದಾದಮೇಲೆ ಮತ್ತೊಂದಂತೆ ವಿವಾದಗಳನ್ನು ಸೃಷ್ಠಿಸಿಕೊಂಡು ವಿವಾದಗಳನ್ನು ಮಾಡಿಕೊಳ್ಳುತ್ತಲೇ ಬಂದಿದ್ದಾರೆ.
ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಸ್ವತಃ ಅವರ ಪರ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರೇ ಪತ್ರದ ಮುಖಾಂತರ ಜೈಲಿನಲ್ಲಿ ಸುಮ್ಮನಿರುವಂತೆ ಶಿಸ್ತಿನ ಪಾಠ ಮಾಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಸೀಗರೇಟ್ ಸೇದುತ್ತಿರುವುದು ಹಾಗೂ ಕಾಫಿ ಕುಡಿಯುತ್ತಿರುವ ಭಾವಚಿತ್ರ ಭಾರಿ ಮಟ್ಟದಲ್ಲಿ ವೈರಲ್ ಆಗಿತ್ತು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ದರ್ಶನ್ ಅವರನ್ನು ಬೆಂಗಳೂರಿನಿಂದ ಬಳ್ಳಾರಿಗೆ ಹಸ್ತಾಂತರ ಮಾಡುವಂತೆ ಮಾಡಿಕೊಂಡಿದ್ದರು. ಈ ಮಧ್ಯೆ ಬಳ್ಳಾರಿಯಲ್ಲಿಯೂ ಸಹ ಮಾಧ್ಯಮಗಳಿಗೆ ಅಶ್ಲೀಲ ಸನ್ನೆ ತೋರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಹೀಗಾಗಿ ದರ್ಶನ್ ಅವರ ಪರ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರಿಂದಲೇ ದುರ್ನಡತೆಯನ್ನು ಸರಿಪಡಿಸಿಕೊಳ್ಳುವಂತೆ ಕಿವಿಮಾತು ಬಂದಿದೆ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆ ಅಷ್ಟೇ ರೇಣುಕಾ ಸ್ವಾಮಿ ಕೊಲೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ 17 ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಈ ಚಾರ್ಜ್‌ಶಿಟ್‌ನಲ್ಲಿ ಪ್ರಕರಣದ ಅನೇಕ ವಿಚಾರಗಳು ಉಲ್ಲೇಖವಾಗಿದ್ದವು. ಹೀಗಿದ್ದರೂ ಇಲ್ಲಿಯವರೆಗೂ ದರ್ಶನ್ ಅವರ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಸಲ್ಲಿಸಿರಲಿಲ್ಲ. ಒಂದು ವೇಳೆ ಅವರ ಪರ ಜಾಮೀನು ಸಲ್ಲಿಕೆ ಮಾಡಿದರೆ, ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ವಿಷಯಗಳು ಹಾಗೂ ವಿವಾದತ್ಮಕ ವಿಚಾರಗಳು ಹೈಲೈಟ್ ಆಗಿ ಜಾಮೀನಿಗೆ ತೊಂದರೆಯಾಗುತ್ತವೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂದಿನಂತೆಯೇ ವಿವಾದತ್ಮಕ ವಿಚಾರಗಳನ್ನು ಸೃಷ್ಠಿಕೊಂಡು ಪದೇ ಪದೇ ಕಿರಿಕ್ ಮಾಡಿಕೊಂಡರೆ ಜಾಮೀನಿಗೆ ತೊಂದರೆಯಾಗುತ್ತದೆ. ಅಲ್ಲದೆ ಈ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಈ ಪತ್ರವನ್ನು ಜೈಲು ಸಿಬ್ಬಂದಿಯೂ ದರ್ಶನ್‌ಗೆ ನೀಡಿದ್ದಾರೆ.