Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಚಿಕ್ಕ ಗಡಿಯಾರದ ಸುತ್ತಲೂ ಮುರುಕಲು ಬೆಂಚು, ಕೊಳಕು

ಮೈಸೂರು: ದಸರಾ ಜಂಬೂ ಸವಾರಿ ಸಾಗುವ ಮಾರ್ಗ ಸಯ್ಯಾಜಿರಾವ್ ರಸ್ತೆಯ ಇರುವ ಹೆಸರಾಂತ ಚಿಕ್ಕ ಗಡಿಯಾರದ ಸುತ್ತಲಿನ ಪ್ರದೇಶ ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಮುಂಭಾಗದ ಇರುವ ಈ ಗಡಿಯಾರದ ಸುತ್ತಲಿನ ಸ್ಥಳವನ್ನು ಕಳೆದ ೨೦೧೨ರಲ್ಲಿ ಮೈಸೂರು ಮಹಾನಗರಪಾಲಿಕೆ ಅಭಿವೃದ್ಧಿ ಮಾಡಿತ್ತು. ಆಗ ಅಲ್ಲಿ ಆಕರ್ಷಕ ನೆಲಹಾಸು, ಕುಳಿತುಕೊಳ್ಳಲು ಬೆಂಚುಗಳು, ಅಲ್ಲಲ್ಲಿ ಹೂ ಕುಂಡಗಳು ಮತ್ತು ಅಲಂಕಾರಿಕ ದೀಪಗಳನ್ನು ಅಳವಡಿಸಿ, ಕಾರಂಜಿಯನ್ನೂ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಗಡಿಯಾರದ ಸುತ್ತಲೂ ಇದ್ದ ಬೆಂಚುಗಳು ಮುರಿದು ಬಿದ್ದಿದೆ. ಆದರೂ ಪಾಲಿಕೆ ತಲೆಕೆಡಿಸಿಕೊಂಡಿಲ್ಲ.

ಗಡಿಯಾರ ಕೆಟ್ಟು ನಿಂತರೂ ದುರಸ್ತಿ ಮಾಡಿಸುತ್ತಿಲ್ಲ. ಸುತ್ತಲೂ ಅನೈರ್ಮಲ್ಯ ಆವರಿಸಿಕೊಂಡಿದೆ. ಈ ಭಾಗದಲ್ಲಿ ಹಣ್ಣು, ತರಕಾರಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದು ತ್ಯಾಜ್ಯ ಇಲ್ಲೇ ಹಾಕುತ್ತಾರೆ ಹಾಗೂ ಇದೇ ಸ್ಥಳದಲ್ಲಿ ಎಲೆ ಅಡಕೆ, ಗುಟ್ಕಾ, ಪಾನ್ ಹಾಕುವ ಜನರು ಇಲ್ಲೇ ಉಗುಳುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳಿಗೆ ಈ ಮುರಿದ ಬೆಂಚುಗಳನ್ನು ದುರಸ್ತಿ ಪಡಿಸಬೇಕೆಂಬ ಆಲೋಚನೆ ಏಕೆ ಬರುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ದಸರಾಕ್ಕೆ ದಿನಗಣನೆ ಆರಂಭವಾಗಿದೆ. ನಗರದ ಎಡೆ, ರಸ್ತೆ ದುರಸ್ತಿ, ಬಣ್ಣ ಬಳಿಯುವುದು, ದೀಪಾಲಂಕಾರ ಸಿದ್ಧತಾ ಕಾರ್ಯಗಳನ್ನು ಪಾಲಿಕೆ ನಡೆಸುತ್ತಿದೆ. ಆದರೆ, ಚಿಕ್ಕಗಡಿಯಾರದ ಸುತ್ತಲೂ ದುರಸ್ತಿ ಕಾರ್ಯದ ಕಡೆಗೆ ಗಮನ ಕೊಡುತ್ತಿಲ್ಲ. ಇನ್ನಾದರೂ ಇತ್ತ ಗಮನ ಕೊಡುತ್ತಾರೋ ಇಲ್ಲವೋ ನೋಡಬೇಕಿದೆ.

ನಗರದ ಹೆಸರಾಂತ ಚಿಕ್ಕ ಗಡಿಯಾರದ ಸುತ್ತಲೂ ಇರುವ ಮುರಿದು ಬೆಂಚುಗಳು ವರ್ಷದಿಂದ ಹೀಗೇ ಬಿದ್ದಿವೆ. ಈ ಬೆಂಚುಗಳನ್ನು ತೆರವು ಮಾಡಿ ಹೊಸ ಬೆಂಚುಗಳನ್ನು ಅಳವಡಿಸಲು ಪಾಲಿಕೆ ಅಧಿಕಾರಿಗಳು ತಡ ಮಾಡುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಬೇಸರ ಆಗುತ್ತದೆ. -ಸಿ. ಶಿವಣ್ಣ, ಸ್ಥಳೀಯರು

Tags: