Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಾಳು ಕೊಂಪೆಯಾದ ಕೆಆರ್‌ ಆಸ್ಪತ್ರೆ ಉದ್ಯಾನವನ

ಮೈಸೂರು: ದಸರಾ ಹಿನ್ನೆಲೆಯಲ್ಲಿ ನಗರದಾದ್ಯಂತ ಅನೇಕ ಸ್ಥಳಗಳಲ್ಲಿ ಸೌಂದರ್ಯವನ್ನು ಹೆಚ್ಚಿಸುವಂತಹ ಕಾರ್ಯಗಳು ನಡೆಯುತ್ತಿವೆ. ಆದರೆ, ನಗರದ ಹೃದಯಭಾಗದಲ್ಲಿರುವ ಕೆ. ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯ ಮುಂಭಾಗದಲ್ಲಿರುವ ಉದ್ಯಾನವನಗಳು ಮಾತ್ರ ಹಾಳು ಕೊಂಪೆಯಾಗಿ ಪರಿವರ್ತನೆಯಾಗಿವೆ.

ಕೆಲ ವರ್ಷಗಳ ಹಿಂದಿನ ಮಾತು. ನಗರದ ಕೆ. ಆರ್. ಆಸ್ಪತ್ರೆಯ ಮುಂಭಾಗ ಹಾಗೂ ಚೆಲುವಾಂಬ ಆಸ್ಪತ್ರೆಯ ಮುಂಬದಿಯಲ್ಲಿ ಸುಂದರವಾದ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಹುಲ್ಲು ಹಾಸಿನ ಜೊತೆಗೆ ವಿವಿಧ ಅಲಂಕಾರಿಕ ಗಿಡಗಳನ್ನು ನೆಡಲಾಗಿತ್ತು. ಆದರೆ, ಇಂದು ಅದೇ ಸ್ಥಳಕ್ಕೆ ತೆರಳಿ ನೋಡಿ ದರೆ ಬೇಸರ ಮೂಡುತ್ತದೆ. ಉದ್ಯಾನವನದ ಜಾಗವೀಗ ಖಾಲಿ ಮೈದಾನದಂತಿದೆ.

ಅಲ್ಲಲ್ಲಿ ಹೆಗ್ಗಣಗಳು ತೋಡಿರುವ ಹಳ್ಳಗಳು ಜನರನ್ನು ಕೈ ಬೀಸಿ ಕರೆಯುತ್ತವೆ. ಅಲಂಕಾರಿಕ ಗಿಡಗಳಂತೂ ಮಾಯವಾಗಿವೆ. ವಿಪರ್ಯಾಸವೆಂದರೆ, ಉದ್ಯಾನವನವಿದ್ದ ಜಾಗವೀಗ ಕಾರು, ದ್ವಿಚಕ್ರ ವಾಹನ, ಆಟೋಗಳ ಪಾರ್ಕಿಂಗ್ ತಾಣವಾಗಿಬಿಟ್ಟಿದೆ. ಅಲ್ಲಿ ‘ವಾಹನ ನಿಲುಗಡೆ’ ಎಂಬ ಬೋರ್ಡ್ ಕೂಡ ಬಂದುಬಿಟ್ಟಿದೆ. ಈ ಹಿಂದೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಽಗಳು ಹಾಗೂ ಸ್ನೇಹಿತರನ್ನು ಕಾಣಲು ಬರುತ್ತಿದ್ದವರು ಆಸ್ಪತ್ರೆಯ ಮುಂಭಾಗದಲ್ಲಿನ ಉದ್ಯಾನವನದ ಮರಗಿಡಗಳ ಕೆಳಗೆ ಕುಳಿತು ಕೆಲಕಾಲ ವಿಶ್ರಾಂತಿ ಪಡೆಯುತ್ತಿದ್ದರು. ಕೆಲವೊಮ್ಮೆ ಭೋಜನವೂ ಅಲ್ಲೇ ಆಗುತ್ತಿತ್ತು. ಆದರೀಗ ಅಲ್ಲಿ ತಂಪಾದ ವಾತಾವರಣ ಮಾಯವಾಗಿರುವುದರಿಂದ ಯಾರೂ ಕೂಡ ಅತ್ತ ತಲೆಹಾಕುತ್ತಿಲ್ಲ. ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯ ಜಂಬೂ ಸವಾರಿ ಇದೇ ಮಾರ್ಗದಲ್ಲಿ ಸಾಗುತ್ತದೆ. ದೇಶ, ವಿದೇಶಗಳ ಪ್ರವಾಸಿಗರಿಗೆ ಆಸ್ಪತ್ರೆ ಕಾಣಸಿಗುತ್ತದೆ. ಹೀಗಾಗಿ ಅಲ್ಲಿನ ಅವ್ಯವಸ್ಥೆಯನ್ನು ಕಾಣುವ ಪ್ರವಾಸಿಗರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಬಗ್ಗೆ ಏನನ್ನಿಸಬೇಡ ಎಂಬ ಪ್ರಶ್ನೆ ಕೂಡ ಕಾಡುತ್ತದೆ. ದಸರಾ ಹಬ್ಬಕ್ಕೆ ಸಯ್ಯಾಜಿರಾವ್ ರಸ್ತೆ ಮದುವಣಿಗಿತ್ತಿಯಂತೆ ಸಿಂಗಾರಗೊಂಡರೆ, ಸಮೀಪದಲ್ಲಿಯೇ ಇರುವ ಆಸ್ಪತ್ರೆಯ ಉದ್ಯಾನವನ ಮಾತ್ರ ಕಳಾಹೀನವಾಗಿ ಗೋಚರಿಸುತ್ತದೆ.

ವಾಹನ ನಿಲುಗಡೆಗೆ ಸೀಮಿತ: ಈ ಹಿಂದೆ ಈ ಸ್ಥಳ ಕೇವಲ ಉದ್ಯಾನವನಕ್ಕೆ ಮಾತ್ರ ಸೀಮಿತವಾಗಿತ್ತು. ಆದರೀಗ ಅದು ವೈದ್ಯರು, ದಾದಿಯರು ಹೀಗೆ ಆಸ್ಪತ್ರೆಯ ಸಿಬ್ಬಂದಿಗಳ ವಾಹನಗಳಿಗೆ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ಅಲ್ಲಿ ೫೦ಕ್ಕೂ ಹೆಚ್ಚು ಕಾರು ಹಾಗೂ ನೂರಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇನ್ನು ಅಲ್ಲಿ ಹಸಿರು ವಾತಾವರಣ ನಿರ್ಮಾಣವಾಗಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಕೇಳುತ್ತಾರೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರಲ್ಲಿ ಬಹುತೇಕ ಮಂದಿ ವಿದ್ಯಾವಂತರು. ವೈದ್ಯರ ಬಗ್ಗೆಯಂತೂ ಏನೂ ಹೇಳಬೇಕಿಲ್ಲ. ಆದರೆ, ವಿದ್ಯಾವಂತರಾದ ವೈದ್ಯರು, ಪ್ರತೀ ದಿನ ತಮ್ಮ ಕಾರುಗಳನ್ನು ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿಲ್ಲಿಸುವ ಮೂಲಕ ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

ಕಾಲ ಮಿಂಚಿಲ್ಲ: ದಸರಾ ಆರಂಭಕ್ಕೆ ಇನ್ನೂ ಸಾಕಷ್ಟು ದಿನಗಳು ಬಾಕಿಯಿವೆ. ಆಸ್ಪತ್ರೆಯ ಅಧಿಕಾರಿಗಳು ತೋಟಗಾರಿಕೆ ಇಲಾಖೆಯ ಮೂಲಕ ಉದ್ಯಾನವನಕ್ಕೆ ಮೀಸಲಾದ ಜಾಗದಲ್ಲಿ ಸಿದ್ಧವಿರುವ ಹಸಿರು ಹುಲ್ಲಿನ ಹಾಸನ್ನು ಹಾಕಿಸಬಹುದು. ಅಲಂಕಾರಿಕ ಗಿಡಗಳನ್ನು ನೆಡಬಹುದು. ಇದಕ್ಕೆ ಆಸ್ಪತ್ರೆಯ ಮುಖ್ಯಸ್ಥರಿಗೆ ಬದ್ಧತೆ ಇರಬೇಕಷ್ಟೆ.

ಇದೀಗ ಆಸ್ಪತ್ರೆಯ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದೇ ವೇಳೆ ಆಸ್ಪತ್ರೆ ಮುಂಭಾಗದಲ್ಲಿ ಉದ್ಯಾನವನ ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ. ನಾಡಹಬ್ಬ ದಸರಾ ಒಳಗೆ ಅಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಹುಲ್ಲುಹಾಸು ಹಾಗೂ ಅಲಂಕಾರಿಕ ಗಿಡಗಳನ್ನು ನೆಡುವಂತೆ ಸೂಚನೆ ನೀಡಲಾಗಿದೆ. -ಕೆ. ಆರ್. ದಾಕ್ಷಾಯಿಣಿ, ಡೀನ್, ಎಂಎಂಸಿ

ಇದು ನನ್ನ ಗಮನಕ್ಕೂ ಬಂದಿದೆ. ಉದ್ಯಾನವನಕ್ಕೆ ಮೀಸಲಾದ ಜಾಗವನ್ನು ಹಸಿರೀಕರಣಗೊಳಿಸಬೇಕು. ಈ ಸಂಬಂಧ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಸರಿಪಡಿಸಲಾಗುವುದು. -ಜಿ. ಲಕ್ಷಿ ಕಾಂತರೆಡ್ಡಿ, ಜಿಲ್ಲಾಧಿಕಾರಿ, ಮೈಸೂರು.

 

 

Tags: