ಹಾಸನ: ಸಿಆರ್‌ಪಿಎಫ್ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ರವಿಶಂಕರ್ ಎಂಬುವವರೇ ಮೃತ ಯೋಧರಾಗಿದ್ದಾರೆ. ಯೋಧನ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಯೋಧ ರವಿಶಂಕರ್ ಅವರ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿಯಿತ್ತು.
ಹೊಳೆನರಸೀಪುರಕ್ಕೆ ಬಂದಿದ್ದ ಯೋಧ ರವಿಶಂಕರ್ ಅವರಿಗೆ ಜ್ವರ, ಸುಸ್ತು, ಉಸಿರಾಟದ ತೊಂದರೆ ಸಮಸ್ಯೆ ಕಾಣಿಸಿಕೊಂಡಿದೆ.
ಕೂಡಲೇ ಅವರನ್ನು ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಸರಿಯಾಗಿ ತಪಾಸಣೆ ಮಾಡದೇ ಕೇವಲ ಮಾತ್ರೆ ನೀಡಿ ಕಳುಹಿಸಿದ್ದರು ಎನ್ನಲಾಗಿದೆ.
ಮನೆಗೆ ತೆರಳುತ್ತಿದ್ದಂತೆ ಯೋಧ ರವಿಶಂಕರ್ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಶಂಕರ್ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯೋಧನ ಶವವನ್ನು ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.





