ಜನರು ಅರಿಯಬೇಕಾದ ಮಾರ್ಗಸೂಚಿ ಹೊರಡಿಸಿದ ಅರಣ್ಯ ಇಲಾಖೆ
ಮೈಸೂರು: ನಾಡಹಬ್ಬ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಗಜಪಡೆ ತಾಲೀಮು ನಡೆಸುವಾಗ ಸಾರ್ವಜನಿಕರಿಂದ ಆಗುವ ಕಿರಿಕಿರಿ ತಪ್ಪಿಸಲು ಅರಣ್ಯ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದೆ.
ನಗರದ ಅರಮನೆಯಿಂದ ಬನ್ನಿಮಂಟಪದವರೆಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಆನೆಗಳು ತಾಲೀಮು ಮಾಡುವಾಗ ಯಾವುದೇ ಕಿರಿಕಿರಿಯಾಗದಂತೆ ಹೆಜ್ಜೆ ಹಾಕಲು ಬೇಕಾದ ಕ್ರಮಗಳನ್ನು ಅನುಸರಿಸಲು ಮುಂದಾಗಿದೆ. ಹಾಗೆಯೇ ಸಾರ್ವಜನಿಕರು ತಾಲೀಮು ವೇಳೆ ಹಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ
* ಮಾವುತರ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು
* ಜನರು ಮಕ್ಕಳನ್ನು ಆನೆಗಳಿಂದ ದೂರವಿರಿಸಬೇಕು
* ದಸರಾ ಗಜಪಡೆಯಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು
* ತಾಲೀಮಿನಲ್ಲಿರುವ ಆನೆಗಳಿಗೆ ಆಹಾರ ನೀಡಲು ಹೋಗಬಾರದು
* ಆನೆಗಳ ಸಮೀಪದಲ್ಲಿ ವಾಹನಗಳನ್ನು ನಿಲ್ಲಿಸಬಾರದು
* ಆನೆಗಳು ಬರುವಾಗ ರಸ್ತೆ ದಾಟುವುದನ್ನು ನಿಲ್ಲಿಸಬೇಕು
* ಗಜಪಡೆಯನ್ನು ಸಮೀಪದಿಂದ ಹಿಂಬಾಲಿಸಬಾರದು.
* ರಸ್ತೆಯಲ್ಲಿ ಆನೆಗಳು ನಡೆದು ಹೋಗುತ್ತಿರುವಾಗ ಹೂವು ಎಸೆಯಬಾರದು.
* ಆನೆಗಳು ನಡೆಯುವಾಗ ಅವುಗಳ ಮುಂದೆ ನಿಂತು ಸೆಲ್ಫಿ ವಿಡಿಯೋ, ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಳ್ಳಬಾರದು.