Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜಮಾರ್ಗ ಕುರೂಪ; ಬೇಕು ಕಾಯಕಲ್ಪ

ಮೈಸೂರು: ನಾಡಹಬ್ಬ ದಸರಾಗೆ ದಿನಗಣನೇ ಆರಂಭವಾಗಿದೆ. ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿನ ಜನತೆ ಸಜ್ಜಾಗು ತ್ತಿದ್ದು, ಅಧಿಕಾರಿ ವರ್ಗ ಹಾಗೂ ರಾಜಕೀಯ ಮುಖಂಡರೂ ನಾಡ ಹಬ್ಬವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದಾರೆ. ಆದರೆ, ಅರಮನೆ ಸುತ್ತ ನಿರ್ಮಾಣವಾಗಿರುವ ರಾಜಮಾರ್ಗ ತನ್ನ ಹಾಳಾದ ಪಳೆಯುಳಿಕೆಗಳ ಮೂಲಕ ಪ್ರವಾಸಿಗರನ್ನು ಸ್ವಾಗತಿಸಲು ಎದುರು ನೋಡುತ್ತಿದೆ. ನಗರದ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ.

ಇನ್ನು ಪಾದಚಾರಿ ಮಾರ್ಗಗಳ ಸ್ಥಿತಿಯನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದಸರಾದ ಕೊನೇ ಕ್ಷಣದಲ್ಲಿ ತರಾತುರಿಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆಸಲಾಗುತ್ತಿದೆ. ಆದರೆ ರಾಜ ಮಾರ್ಗದತ್ತ ಯಾರೂ ತಿರುಗಿ ನೋಡುತ್ತಿಲ್ಲ ಎಂಬುದೇ ನೋವಿನ ಸಂಗತಿ. ಅರಮನೆ ಸುತ್ತ ಹಾಗೂ ಪ್ರತಿಷ್ಠಿತ ಜಂಬೂ ಸವಾರಿ ಸಾಗುವ ರಾಜಮಾರ್ಗದ ಫುಟ್ ಪಾತ್‌ಗಳಲ್ಲಿ ರಂಧ್ರಗಳು, ಮುರಿದ ಟೈಲ್ಸ್, ರೈಲಿಂಗ್ಸ್‌ಗಳು, ಅಲ್ಲಲ್ಲಿ ಕಾಣೆಯಾಗಿರುವ ಕಲ್ಲು ಕಂಬಗಳು ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲವೇ? ಎಂಬುದು ಸಾರ್ವಜನಿಕರ ಆಕ್ರೋಶ ಭರಿತ ಪ್ರಶ್ನೆ.

ಮೈಸೂರು ಅರಮನೆಯ ಸುತ್ತಲೂ ಮತ್ತು ದಸರಾ ಮೆರವಣಿಗೆ ಸಾಗುವ ಹಾದಿಯ ಫುಟ್‌ಪಾತ್‌ನಲ್ಲಿ ೨೦೧೦ರಲ್ಲಿ ರಾಜ ಮಾರ್ಗ ನಿರ್ಮಾಣಕ್ಕೆ ನಾಂದಿ ಹಾಡಲಾಯಿತು. ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡಿತು. ನಂತರ ಕೇವಲ ಒಂದೆರಡು ವರ್ಷಗಳ ಹಿಂದೆ ನಿರ್ಮಿಸಲಾದ ಕಲ್ಲಿನ ಕಂಬಗಳು ಅನೇಕ ಕಡೆ ನಾಶವಾದವು. ನಂತರದ ದಿನಗಳಲ್ಲಿ ದಸರಾ ವೇಳೆ ಮಾತ್ರ ನೆಪ ಮಾತ್ರಕ್ಕೆ ಅವುಗಳನ್ನು ದುರಸ್ತಿಗೊಳಿಸುವ ಕೆಲಸ ಮಾಡಲಾಯಿತು. ಕೆಲ ತಿಂಗಳ ನಂತರ ಮತ್ತೆ ಅಲ್ಲಿನ

ನೆಲಹಾಸು ಹಾಗೂ ರೈಲಿಂಗ್ಸ್‌ಗಳು ಮುರಿದು ಬಿದ್ದಿವೆ. ಅಽಕಾರಿಗಳು ಇದಕ್ಕೆ ಕಾರಣವನ್ನು ಹೇಳಲು ಮಾತ್ರ ತಯಾರಿಲ್ಲ. ಇದೀಗ ನೂರಾರು ಕಲ್ಲು ಕಂಬಗಳು ನಾಪತ್ತೆಯಾಗಿವೆ. ರಾಜಮಾರ್ಗ ಎಂಬುದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆ.

ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ರಾಯಲ್ ಟಚ್ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನೀಡಿದ್ದ ೧೦೦ ಕೋಟಿ ರೂ. ವಿಶೇಷ ಅನುದಾನ ದಲ್ಲಿ ಈ ಕಾಮಗಾರಿಯನ್ನು ನಡೆಸಲಾಗಿತ್ತು. ರಾಜಮಾರ್ಗ ಯೋಜನೆಗೆ ಕೋಟ್ಯಂತರ ರೂ. ವೆಚ್ಚವಾಗಿದೆ. ಆದರೆ ಇಂದು ರಾಜ ಮಾರ್ಗ ಅನೇಕ ಕಡೆಗಳಲ್ಲಿ ಹಾಳಾಗಿದ್ದು, ರಾಜ ಮನೆತನದ ಹಳೆಯ ಅವಶೇಷಗಳಂತೆ ಕಂಡು ಬರುತ್ತಿದೆ. ಕಾಲಕಾಲಕ್ಕೆ ಅವುಗಳನ್ನು ದುರಸ್ತಿ ಗೊಳಿಸಬೇಕು, ಮೈಸೂರಿನ ಅಂದವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬ ಬದ್ಧತೆ ಅಧಿಕಾರಿಗಳಲ್ಲಿ ಇದ್ದಂತೆ ಕಾಣುತ್ತಿಲ್ಲ.

ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ದೇಶ, ವಿದೇಶಗಳ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬಂದವರು ಪಾರಂಪರಿಕ ಆಕರ್ಷಣೆಯ ಕೇಂದ್ರವಾದ ಅರಮನೆಯನ್ನು ವೀಕ್ಷಣೆ ಮಾಡದೆ ತೆರಳುವುದಿಲ್ಲ. ಈ ವೇಳೆ ಅರಮನೆ ಸುತ್ತ ಹಾಗೂ ರಾಜ ಮಾರ್ಗದಲ್ಲಿನ ಅವ್ಯವಸ್ಥೆಯ ದರ್ಶನವೂ ಅವರಿಗೆ ಆಗುವುದು ಬೇಡ. ಮೈಸೂರಿನ ಪ್ರವಾಸದಲ್ಲಿ ಕಣ್ತುಂಬಿಕೊಂಡ ಕ್ಷಣಗಳಲ್ಲಿ ರಾಜಮಾರ್ಗದ ಅವ್ಯವಸ್ಥೆ ಅವರನ್ನು ಕಾಡುವುದು ಬೇಡ. ಹೀಗಾಗಿ ಅಽಕಾರಿಗಳು ಈಗಲಾದರೂ ಎಚ್ಚೆತ್ತು ರಾಜಮಾರ್ಗವನ್ನು ಸುಂದರಗೊಳಿಸ ಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ರಾಜಮಾರ್ಗದಲ್ಲಿನ ಅವ್ಯವಸ್ಥೆ ಬಗ್ಗೆ ನಮಗೆ ತಿಳಿದಿದೆ. ಆದರೆ, ರಾಜಮಾರ್ಗ ನಿರ್ಮಾಣ ಮಾಡಿದಂತಹ ಗುತ್ತಿಗೆದಾರರು ಹೆಚ್ಚಿನ ಹಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸ್ಥಳೀಯ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರವಾಗಿ ಬಂದಿದೆ. ನಂತರ ಅವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿಯೂ ನಮಗೆ ಜಯ ಸಿಗುವ ವಿಶ್ವಾಸವಿದೆ. ವಿವಾದ ಬಗೆಹರಿದ ನಂತರ ರಾಜಮಾರ್ಗ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಹಾಳಾಗಿರುವ ನೆಲಹಾಸನ್ನು ಮಾತ್ರ ಆಗಾಗ್ಗೆ ಬದಲಾಯಿಸುವ ಕೆಲಸವಾಗುತ್ತಿದೆ. -ಸಿಂಧು, ಅಧೀಕ್ಷಕ ಅಭಿಯಂತರರು, ನಗರಪಾಲಿಕೆ.

* ೪೦ ಕೋಟಿ ರೂ. ಅನು ದಾನದಲ್ಲಿ ಕಾಮಗಾರಿ

*ಅರಮನೆ ಸುತ್ತ, ಪುರಭವನ, ಸಯ್ಯಾಜಿರಾವ್ ರಸ್ತೆ ಸೇರಿ ೬ ಕಿ. ಮೀ ಕಾಮಗಾರಿ

* ನೆಲಹಾಸು, ಪಾರಂಪರಿಕ ಶೈಲಿಯ ದೀಪ,ಕಲ್ಲು ಕಂಬ,ರೈಲಿಂಗ್ಸ್

* ೨೦೧೦ರಲ್ಲಿ ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್‌ರಿಂದ ಟೆಂಡರ್ ಪ್ರಕ್ರಿಯೆ

*ಸಿ. ಜಿ. ಬೆಟಸೂರಮಠ ಅವಧಿಯಲ್ಲಿ ೨೦೧೪ – ೧೫ರಲ್ಲಿ ಕಾಮಗಾರಿ ಪೂರ್ಣ

 

 

Tags: