Mysore
21
overcast clouds
Light
Dark

ಅಂಡಮಾನ್ – ನಿಕೋಬಾರ್ ದ್ವೀಪದಲ್ಲಿ ಕುಣಿದ ‘ಚೌಕಿದಾರ್’

‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಚೌಕಿದಾರ್‍’ ಚಿತ್ರದ 53 ದಿನಗಳ ಮೊದಲ ಹಂತದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್ – ನಿಕೋಬಾರ್ ದ್ವೀಪದಲ್ಲಿ ‘ಚೌಕಿದಾರ್’ ಚಿತ್ರಕ್ಕೆ 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಶಿವರಾಜಕುಮಾರ್‍ ಅಭಿನಯದ ‘ಅಂಡಮಾನ್‍’ ಚಿತ್ರವನ್ನು ಹೊರತುಪಡಿಸಿದರೆ, ಕನ್ನಡದ ಯಾವೊಂದು ಚಿತ್ರವೂ ಈ 26 ವರ್ಷಗಳಲ್ಲಿ ಅಂಡಮಾನ್‍ನಲ್ಲಿ ಚಿತ್ರೀಕರಣ ಆಗಿರಲಿಲ್ಲ. ಈಗ ‘ಚೌಕಿದಾರ್‍’ ಚಿತ್ರದ ಹಾಡು ಮತ್ತು ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದುವರೆಗೂ ಹೆಚ್ಚಾಗಿ ಲವರ್‌ ಬಾಯ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್, ಈ ಚಿತ್ರದಲ್ಲಿಲ ಆ್ಯಕ್ಷನ್‍ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರಿಗೆ ನಾಯಕಿಯಾಗಿ ಧನ್ಯಾ ರಾಮ್‍ಕುಮಾತ್‍ ನಟಿಸುತ್ತಿದ್ದಾರೆ. ಇದೊಂದು ಫ್ಯಾಮಿಲಿ ಚಿತ್ರವಾಗಿದ್ದು, ಸಾಯಿಕುಮಾರ್‍ ಮತ್ತು ಪೃಥ್ವಿ ಅಪ್ಪ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ನಟ ಧರ್ಮ ಬಹಳ ದಿನಗಳ ನಂತರ ಪೂರ್ಣಪ್ರಮಾಣದ ವಿಲನ್‍ ಆಗಿ ನಟಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ಅಂಬಾರ್, ಧನ್ಯ ರಾಮ್‍ಕುಮಾರ್‍, ಸಾಯಿಕುಮಾರ್ ಮುಂತಾದವರು ನಟಿಸುತ್ತಿದ್ದು, ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ.

‘ಚೌಕಿದಾರ್‍’ ಚಿತ್ರಕ್ಕೆ ಸಚಿನ್‌ ಬಸ್ರೂರು ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆಯುತ್ತಿದ್ದಾರೆ.

Tags: