Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಎಸ್‌ಐ ವಿರುದ್ಧ ಧಮ್ಕಿ ಆರೋಪ; ರೈತ ಸಂಘದಿಂದ ಪ್ರತಿಭಟನೆ

ಹನೂರು: ಜಮೀನಿನ ಆಸ್ತಿಗೆ ಸಂಬಂಧಪಟ್ಟಂತೆ ದೂರು ನೀಡಿದ್ದ ರೈತ ಸಂಘದ ಮಹಿಳಾ ಸದಸ್ಯರಿಗೆ ರಾಮಾಪುರ ಸಬ್ ಇನ್ಸ್ಪೆಕ್ಟರ್ ಈಶ್ವರ್ ದೂರವಾಣಿ ಮುಖಾಂತರ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಪೊಲೀಸ್ ಠಾಣಾ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದ ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ರೈತ ಸಂಘದ ಮಹಿಳೆಯ ಮೇಲೆ ಬೆಂಗಳೂರು ಮೂಲದ ಖಾಸಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ವಿಚಾರವಾಗಿ ರೈತ ಮಹಿಳೆ ತನ್ನ ಮೇಲೆ ಬೆಂಗಳೂರಿನವರು ದೂರು ನೀಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಾಗ ನಾನೇ ರಾಮಾಪುರ ಪೊಲೀಸ್ ಠಾಣೆಗೆ ರೈತನ ಮಹಿಳೆಯ ಜೊತೆ ಹಾಜರಾಗಿ ದೂರು ಕೊಡಿಸಿದ್ದೆ ಈ ವೇಳೆ ಅವರನ್ನು ಕರೆಸಿ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿ ನಾಳೆ ಬರುತ್ತೇವೆ ಎಂದು ಗೌರವಿದಿಂದ ನಡೆದುಕೊಂಡು ಗ್ರಾಮಕ್ಕೆ ವಾಪಸ್ ತೆರಳಿದ್ದೇವೆ. ನಂತರ ರೈತ ಮಹಿಳೆಗೆ ದೂರವಾಣಿ ಕರೆ ಮಾಡಿದ ಈಶ್ವರ್ ರವರು ನಿನ್ನನ್ನು ಒದ್ದು ಒಳಗೆ ಹಾಕುತ್ತೇನೆ ಎಂದು ಧಮಕಿ ಹಾಕಿದಲ್ಲದೇ, ನನಗೂ ಅವರನ್ನು ಕರೆತಂದು ದೂರು ಕೊಡಲು ನೀನು ಯಾರು ಎಂದು ಧಮ್ಕಿ ಹಾಕಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ, ರೈತ ಸಂಘದ ತಾಲೂಕು ಅಧ್ಯಕ್ಷರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವ ಇವರು ಸಾಮಾನ್ಯ ಜನರಿಗೆ ಯಾವ ರೀತಿ ಸಹಕಾರ ನೀಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ರಾಜ್ಯವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರುವಾಸಿಯಾಗಿದೆ. ಇದುವರೆಗೂ ಇಲ್ಲಿ ಕರ್ತವ್ಯ ನಿರ್ವಹಿಸುವ ಪಿ ಐ, ಎಸ್ ಐ ಹಾಗೂ ಸಿಬ್ಬಂದಿಗಳು ಉತ್ತಮ ಆಡಳಿತ ನೀಡುವುದರ ಮೂಲಕ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಬಂದಿರುವ ಎಸ್ಐ ಈಶ್ವರ್ ರವರು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಹಿನ್ನೆಲೆ ಏನೆಂಬುದು ತಿಳಿದಿಲ್ಲ, ಇಂಥ ಅವಿವೇಕಿ ಅಧಿಕಾರಿಯನ್ನು ಯಾವ ರೀತಿ ಕಳುಹಿಸಬೇಕು ಎಂಬುದು ನಮಗೂ ತಿಳಿದಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪಿ ಐ ಶಶಿಕುಮಾರ್ ಮಾತನಾಡಿ ಪೊಲೀಸ್ ಠಾಣೆಗೆ ಬರುವ ಪ್ರತಿಯೊಬ್ಬರನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯ, ಎಸ್ಐ ರವರು ಮಾತಿನ ಭರದಲ್ಲಿ ಮಾತನಾಡಿದ್ದಾರೆ, ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿ ರೈತರಿಗೆ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಇವರ ಮಾತಿಗೂ ಸಮಾಧಾನಗೊಳ್ಳದ ರೈತ ಮುಖಂಡರುಗಳ ಮನವೊಲಿಸಲು ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧರ್ಮೇಂದ್ರರವರು ದೂರವಾಣಿ ಮುಖಾಂತರ ಸಂಪರ್ಕಿಸಿ ರೈತರ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ಮಾತನಾಡಿ ನಾವು ನಾಗಮಂಗಲದ ಬಂದೋಬಸ್ತ್ ಕರ್ತವ್ಯಕ್ಕೆ ಆಗಮಿಸಿದ್ದೇವೆ. ವಾಪಸ್ ಬಂದ ನಂತರ ವರದಿ ಪಡೆದುಕೊಂಡು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ರೈತ ಸಂಘದ ಮುಖಂಡರುಗಳು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಶೈಲೇಂದ್ರ ಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಅರ್ಪುದ ರಾಜ್, ರೈತ ಮುಖಂಡರಾದ ರವಿ ನಾಯ್ಡು, ಬಸವರಾಜು ಸೇರಿದಂತೆ ನೂರಕ್ಕೂ ಹೆಚ್ಚು ಜನ ರೈತ ಮುಖಂಡರುಗಳು ಭಾಗಿಯಾಗಿದ್ದರು.

Tags:
error: Content is protected !!