ಮಂಡ್ಯ: ಸರ್ಕಾರ ಒಂದು ಗುಂಪನ್ನು ಓಲೈಸುತ್ತಿರುವುದರಿಂದ ಈ ರೀತಿಯ ಉದ್ಧಟತನ ಪ್ರಾರಂಭವಾಗಿದೆ ಎಂದು ಮಂಡ್ಯದಲ್ಲಿ ಗಣೇಶ ವಿಸರ್ಜನೆ ಗಲಾಟೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಗಲಾಟೆ ಸಂಬಂಧ ಎಸ್‌ಪಿ ಜೊತೆ ಮಾತನಾಡಿದ್ದೇನೆ. ನಿನ್ನೆ ಸಾಯಂಕಾಲ ನಡೆದ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿದೆ. ಇದು ಉಉಲ್ಬಣ ಆಗದಂತೆ ನೋಡಿಕೊಳ್ಳಿ. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಾನು ದೆಹಲಿಯಿಂದ ಬಂದ ತಕ್ಷಣ ಸ್ಥಳ ಪರಿಶೀಲನೆ ಮಾಡುತ್ತೇನೆ. ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು. ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಿ ಜನರಲ್ಲಿ ಅಶಾಂತಿ ಉಂಟು ಮಾಡಬಾರದು. ಅಮಾಯಕರ ಸಾವು-ನೋವಾಗಬಾರದು ಎಂದು ಎರಡೂ ಗುಂಪುಗಳಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸರ್ಕಾರ ಒಂದು ಗುಂಪನ್ನು ಓಲೈಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಪದೇ ಪದೇ ಈ ಘಟನೆ ನಡೆಯುತ್ತಿದೆ. ಇಂತಹ ಘಟನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳಿಂದ ಅಮಾಯಕರು ತೊಂದರೆಗೆ ಒಳಗಾಗುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.