Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೊಬೈಲ್ ಆ್ಯಪ್ ಮೂಲಕ ಪ್ರತಿನಿಧಿಗಳ ನೋಂದಣಿಗೆ ಅವಕಾಶ- ಶಾಸಕ ಹೆಚ್.ಟಿ.ಮಂಜು

ಮಂಡ್ಯ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ನೋಂದಣಿ ಮತ್ತು ಸ್ವಚ್ಛತಾ ಸಮಿತಿ ಅಧ್ಯಕ್ಷರೂ ಆದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ನೋಂದಣಿ ಹಾಗೂ ಸ್ವಚ್ಛತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ಮೊಬೈಲ್ ಆ್ಯಪ್ಅನ್ನು ರಚಿಸುವುದರ ಜೊತೆಗೆ ಅನಿವಾರ್ಯ ಸಂದರ್ಭಗಳಲ್ಲಿ ಆಫ್‌ಲೈನ್‌ನಲ್ಲೂ ನೋಂದಣಿ ಮಾಡಿಕೊಂಡು ಕಸಾಪ ವತಿಯಿಂದ ಆನ್ ಲೈನ್ ನ್‌ಗೆ ಪರಿವರ್ತಿಸಲಾಗುವುದು ಎಂದರು.

ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಪ್ರತಿನಿಧಿ ಶುಲ್ಕ ನಿಗದಿಪಡಿಸಿ ಆನ್ ಲೈನ್ ನಲ್ಲೇ ಪಡೆಯಲಾಗುವುದು. ನೋಂದಣಿ ಸಂದರ್ಭದಲ್ಲೇ ವಸತಿ ಅಗತ್ಯವಿರುವವರ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಮೊದಲು ನೋಂದಾಯಿಸಿ ಕೊಂಡವರಿಗೆ ಆದ್ಯತೆಯ ಮೇಲೆ ವಸತಿ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ್ರತಿನಿಧಿಗಳಿಗೆ ವಸತಿ ಬಗ್ಗೆ ಮಾರ್ಗದರ್ಶನ ಮಾಡಲು ನೋಡಲ್ ಅಧಿಕಾರಿಗಳನ್ನಾಗಿ ಸಮಿತಿ ಸದಸ್ಯರನ್ನು ನೇಮಿಸಲಾಗುವುದು. ಸೌಲಭ್ಯ ಒದಗಿಸುವ ದೃಷ್ಟಿಯಿಂದ ಅಂತಿಮ ದಿನಾಂಕ ನಿಗದಿ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದರು.

ಸರ್ಕಾರಿ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರ ಗೊಂದಲ ತಪ್ಪಿಸಲು ಸಮ್ಮೇಳನಕ್ಕೆ ಹಾಜರಾಗುವ ಪ್ರತಿನಿಧಿಗಳಿಗೆ ಆನ್ಲೈನ್ ಮೂಲಕವೇ ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಮಂಡ್ಯದ ಬೆಲ್ಲ,ಸಕ್ಕರೆ ನೀಡಲು ಸಲಹೆ
ನೋಂದಾಯಿತ ಪ್ರತಿನಿಧಿಗಳಿಗೆ ಸಮ್ಮೇಳನದ ವತಿಯಿಂದ ನೀಡಲಾಗುವ ಕೊಡುಗೆಗಳನ್ನು ಜಿಲ್ಲಾವಾರು ಕೌಂಟರ್‌ಗಳನ್ನು ತೆರೆದು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಮಂಡ್ಯದ ಅಸ್ಮಿತೆಯಾದ ಮಂಡ್ಯ ಬೆಲ್ಲ ಮತ್ತು ಸಕ್ಕರೆಯನ್ನು ವಿತರಿಸುವಂತೆ ನೀಡಿದ ಸಲಹೆಯನ್ನು ಶಾಸಕರು ಅನುಮೋದಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಚಿತ್ವ ಕಾಪಾಡುವುದು ಅತೀ ಮುಖ್ಯ
ಕನ್ನಡ ಸಾಹಿತ್ಯ ಸಮ್ಮೇಳನದ ಇಡೀ ಕಾರ್ಯಕ್ರಮದಲ್ಲಿ ಸ್ವಚ್ಛತೆಯೂ ಅತೀ ಮುಖ್ಯವಾಗಿದ್ದು, ಎಲ್ಲರೂ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನವು ಒಟ್ಟು 3 ದಿನಗಳ ಕಾಲ ನಡೆಯಲಿದ್ದು, ಸಮ್ಮೇಳನದಲ್ಲಿ ಒಂದು ದಿನಕ್ಕೆ 2 ಲಕ್ಷ ಜನರು ಬರುವ ಸಾಧ್ಯತೆ ಇದೆ. ಸಮ್ಮೇಳನವು ಪ್ಲಾಸ್ಟಿಕ್ ಹಾಗೂ ಧೂಳು ಮುಕ್ತ ಧ್ಯೇಯವನ್ನು ಹೊಂದಿದ್ದು, ಸ್ವಚ್ಛತೆ ಕಾಪಾಡುವುದು ಅತೀ ಮುಖ್ಯವಾಗಿದೆ. ಜೊತೆಗೆ ನೀರಿನ ವ್ಯವಸ್ಥೆಯು ಅಗತ್ಯವಾಗಿರಬೇಕು ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಮಾತನಾಡಿ, ಸಮ್ಮೇಳನದಲ್ಲಿ ಅಡುಗೆ ಮನೆ, ವೇದಿಕೆ ಕಾರ್ಯಕ್ರಮ, ಶೌಚಾಲಯ, ಪಾರ್ಕಿಂಗ್ ಸ್ಥಳಗಳಲ್ಲಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಬೇಕು. ಅವರಿಗೆ ಮಾಸ್ಕ್, ಟೀ ಶರ್ಟ್ ನೀಡಬೇಕು. ಸಮ್ಮೇಳನ ನಡೆಯುವ ಜಾಗದ ಸುತ್ತ ಮುತ್ತಲೂ ಅಲ್ಲಲ್ಲೇ ಕಸದ ಬುಟ್ಟಿಗಳನ್ನು ಇಡಬೇಕು ಎಂದರು.

ವೇದಿಕೆ ಸಮಿತಿಯವರು ಯಾವ ಸ್ಥಳಗಳಲ್ಲಿ ಮಳಿಗೆಗಳನ್ನು ಇಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಕೊಟ್ಟ ನಂತರ ನಾವು ಯೋಜನೆಯನ್ನು ತಯಾರಿಸಬಹುದು. ಒಂದೊಂದು ಮಳಿಗೆಗೂ ಎಷ್ಟು ಕಾರ್ಮಿಕರನ್ನು ನೇಮಕ ಮಾಡಬೇಕು ಎಂದು ಯೋಜನೆ ಸಿದ್ದಗೊಂಡ ನಂತರ ನಿರ್ಧಾರ ಮಾಡಲಾಗುವುದು ಎಂದರು.

ಸಭೆಯಲ್ಲಿ ನೊಂದಣಿ ಸಮಿತಿ ಸದಸ್ಯ ಕಾರ್ಯದರ್ಶಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಮ್ಮೇಳನ ಸಮನ್ವಯ ಸಮಿತಿ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಜಿ.ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ವಿಶೇಷಾಧಿಕಾರಿ ಚಂದ್ರಶೇಖರ್, ಸದಸ್ಯರಾದ ಮಂಗಲ ಎಂ.ಇ. ಶಿವಣ್ಣ, ಬಿ.ಜಿ.ಉಮಾ, ರಮೇಶ್ ಹಿರೇಮರಳಿ, ಕೆ.ಪರಮೇಶ್,ಎಸ್.ಮಂಜು, ಸಮಾಜ ಸೇವಕ ವಿಜಯಕುಮಾರ್ ಮುಂತಾದವರು ಸಲಹೆ ಸೂಚನೆ ನೀಡಿದರು.

Tags: