ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವಿಚಾರ ಬಾರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಮಹಿಳಾ ಸಿಎಂ ಬಗ್ಗೆ ಕೋಡಿ ಮಠದ ಶ್ರೀಗಳ ಹೇಳಿಕೆ ಕೂಡ ವೈರಲ್ ಆಗಿತ್ತು. ಸದ್ಯ ಈ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೋಡಿಮಠದ ಶ್ರೀಗಳ ಹೇಳಿಕೆ ಹಾಗೂ ವೈರಲ್ ವಿಡಿಯೋ ಬಗ್ಗೆ ಗರಂ ಆಗಿದ್ದು, ಅದೆಲ್ಲಾ ನಗಣ್ಯ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ವಿಚಾರ ಗಲ್ಲಿ, ಬೀದಿಗಳಲ್ಲಿ ಮಾತನಾಡುವಂತದ್ದಲ್ಲ ಎಂದರು.
ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಗಟ್ಟಿಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಎನ್ನುವುದು ಇದೆ. ಶಿಸ್ತು ಎನ್ನುವುದೂ ಇದೆ. ನಾನು ಕೂಡ ಪಕ್ಷದ ಶಿಸ್ತಿನ ಸಿಪಾಯಿ, ಇಂಥ ವಿಚಾರಗಳನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಮ್ಮ ಪಕ್ಷದ 135 ಶಾಸಕರು ತೀರ್ಮಾನಿಸುತ್ತಾರೆ ಎಂದು ಸಚಿವರು ಹೇಳಿದರು.
ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವವರೆಗೆ, ಆಯ್ಕೆಯಾದ ಶಾಸಕರು ತೀರ್ಮಾನ ತೆಗೆದುಕೊಳ್ಳುವವರೆಗೆ ಸಿಎಂ ಸ್ಥಾನದ ಬದಲಾವಣೆಯ ಪ್ರಶ್ನೆ ಬರುವುದಿಲ್ಲ. ಇಂಥ ವಿಚಾರಗಳನ್ನ ಬೀದಿಯಲ್ಲಿ, ಗಲ್ಲಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.