Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹನೂರು: 20 ಲಕ್ಷ ನಗದು, 308 ಗ್ರಾಂ ಚಿನ್ನ ಕಳವು

ಹನೂರು: ಪಟ್ಟಣದ ಹನ್ನೊಂದನೇ ವಾರ್ಡಿನ ನಿವಾಸಿಗಳಾದ ಚಿನ್ನದೊರೆ ಹಾಗೂ ಧನಲಕ್ಷ್ಮಿ ಎಂಬುವರ ಮನೆಯಲ್ಲಿ ಸೋಮವಾರ ತಡರಾತ್ರಿ 20 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ಹನೂರು ಪಟ್ಟಣದ ನಿವಾಸಿಗಳಾದ ಚಿನ್ನದೊರೆ ಹಾಗೂ ಧನಲಕ್ಷ್ಮಿ ಎಂಬುವವರು ತಮ್ಮ ಮೂರನೇ ಮಗಳಾದ ದರ್ಶಿನಿ ಮದುವೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಖರ್ಚಿಗಾಗಿ ಮನೆಯಲ್ಲಿ 20 ಲಕ್ಷ ನಗದು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಆದರೆ ಕಾರ್ಯನಿಮಿತ್ತ ತಮಿಳುನಾಡಿಗೆ ಹೋಗಿ ಸೋಮವಾರ ತಡರಾತ್ರಿ ವಾಪಸ್ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಸ್ಥಳೀಯ ನಿವಾಸಿಗಳ ನೆರವಿನಿಂದ ಹನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ವೃತ ನಿರೀಕ್ಷಕ ಶಶಿಕುಮಾರ್, ಎಸ್ ಐ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಬೆರಳಚ್ಚು ತಜ್ಞರಿಂದ ತಪಾಸಣೆ: ಪಟ್ಟಣದ ಚಿನ್ನದೊರೆ ಎಂಬುವರ ಮನೆಯಲ್ಲಿ ಕಳ್ಳತನವಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಚಾಮರಾಜನಗರದ ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ವರಿಷ್ಠಾಧಿಕಾರಿ ಭೇಟಿ: ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಹನೂರು ಪಟ್ಟಣದ ಚಿನ್ನದೊರೆ ಎಂಬುವರ ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿಯುತ್ತಿದ್ದಂತೆ ಬೆರಳಚ್ಚು ತಜ್ಞರಿಂದ ತಪಾಸಣೆ ಮಾಡಿಸಲಾಗಿದೆ, ಇದಲ್ಲದೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವ್ಯಾಪ್ತಿಯ ಸುತ್ತಮುತ್ತಲಿನ ಸಿಸಿ ಕ್ಯಾಮರಗಳನ್ನು ಪರಿಶೀಲನೆ ಮಾಡಿ ಶೀಘ್ರದಲ್ಲಿಯೇ ಕಳ್ಳರನ್ನು ಪತ್ತೆಹಚ್ಚಲಾಗುವುದು, ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿದಿನ ನಮ್ಮ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದಾರೆ. ಈ ಪಾಯಿಂಟ್ ನಿಗದಿಪಡಿಸಿ ಇಂತಿಷ್ಟು ಸಮಯಕ್ಕೆ ಸರಿಯಾಗಿ ಬೀಟ್ ಮಾಡಲಾಗುತ್ತಿದೆ. ಕಳ್ಳತನ ತಡೆಯುವಲ್ಲಿ ನಮ್ಮ ಇಲಾಖೆಯು ಸೂಕ್ತ ಕ್ರಮ ವಹಿಸಲಿದೆ. ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಾನು ಅಧಿಕಾರ ವಹಿಸಿಕೊಂಡ ನಂತರ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದು ಪ್ರಕರಣ ಪತ್ತೆಹಚ್ಚಲಾಗಿದ್ದು, ಚಾಮರಾಜನಗರದ ಗಾಳಿಪುರ ಬಡಾವಣೆಯಲ್ಲಿ ಒಂಟಿ ಮನೆಯಲ್ಲಿ ಆಗಿರುವ ಕಳ್ಳತನ ಪ್ರಕರಣ ಪತ್ತೆಹಚ್ಚಲಾಗುತ್ತಿದೆ. ಇದೀಗ ಈ ಪ್ರಕರಣ ನಡೆದಿದ್ದು ಆದಷ್ಟು ಬೇಗ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಗದು, ಚಿನ್ನ ಕಳೆದುಕೊಂಡಿರುವ ಚಿನ್ನದೊರೆ ಮಾತನಾಡಿ ನನ್ನ ಮಗಳ ಮದುವೆಗೆ ಕಷ್ಟಪಟ್ಟು ಹಣ ಸಂಪಾದನೆ ಮಾಡಿದ್ದೇನೆ, ತಾವು ದಯವಿಟ್ಟು ಕಳ್ಳರನ್ನು ಪತ್ತೆ ಹಚ್ಚಿ ನಗದು ಹಾಗೂ ಚಿನ್ನವನ್ನು ಹುಡುಕಿ ಕೊಡುವಂತೆ ಮನವಿ ಮಾಡಿದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: