ಹನೂರು: ಕೆಎಸ್ಆರ್ ಟಿಸಿ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಜರುಗಿದೆ.
ಕೊಳ್ಳೇಗಾಲ, ಹನೂರು ಪಟ್ಟಣದಿಂದ ಅಜ್ಜೀಪುರ, ಅಂಬಿಕಾಪುರ, ನಾಗಣ್ಣನಗರ, ಪುದು ರಾಮಪುರ, ರಾಮಪುರ ಮಾರ್ಗವಾಗಿ ಸಂಚರಿಸುವ ಬಸ್ ಚಾಲಕ ಕಬ್ಬಳ್ಳಿ ಗ್ರಾಮದ ಸುಭಾಷ್ ಎಂಬುವವರು ಚಾಲನೆ ಮಾಡುತ್ತಿದ್ದಾಗ ಅವರಿಗೆ ಏಕಾಏಕಿ ಮೂರ್ಚೆ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ. ಪರಿಣಾಮ ಬಸ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತುಕೊಂಡಿದೆ. ಆದರೆ ಈ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ದೊಡ್ಡ ಅನಾಹುತ ತಪ್ಪಿದೆ.
ಇದಲ್ಲದೆ ಬಸ್ಸಲ್ಲಿದ್ದ ಓರ್ವ ಪ್ರಯಾಣಿಕರು ಹಾಗೂ ನಿರ್ವಾಹಕರು ಮಾತ್ರ ಇದ್ದಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಪ್ರತಿದಿನ ಈ ಮಾರ್ಗವಾಗಿ ಸುಮಾರು 40ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಿದ್ದರು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇತ್ತು. ಆದ್ದರಿಂದ ಯಾವೊಬ್ಬ ವಿದ್ಯಾರ್ಥಿಗಳು ಆಗಮಿಸಿರಲಿಲ್ಲ. ಇದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಇನ್ನು ಚಾಲಕ ಸುಭಾಷ್ ಎಂಬುವವರು ಕಳೆದ 12 ವರ್ಷಗಳಿಂದ ಸಂಸ್ಥೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಅಪಘಾತ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಇವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಬೇರೆ ಜವಾಬ್ದಾರಿ ನೀಡುವ ಬದಲು ಚಾಲಕನ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಮುಂದಾದರೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆರೋಗ್ಯವಂತ ಚಾಲಕರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸದ್ಯ ಚಾಲಕ ಸುಭಾಷ್ ಮೂರ್ಛೆ ರೋಗ ಕಾಣಿಸಿಕೊಂಡ ಪರಿಣಾಮ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರು ಚೇತರಿಸಿಕೊಂಡ ಬಂದ ನಂತರ ಇವರಿಗೆ ಬಸ್ ಚಾಲನೆ ಮಾಡಲು ಅವಕಾಶ ನೀಡದೆ ಬೇರೆ ಜವಾಬ್ದಾರಿ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.