Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಈ ಬಾರಿಯೂ ‘ಅ’ಕಾರದ ಮಮತೆ ಮೆರೆದ ಮಹೇಶ್‍ ಬಾಬು

ನಿರ್ದೇಶಕ ಮಹೇಶ್‍ ಬಾಬು ನಿರ್ದೇಶನದ ಚಿತ್ರಗಳು ‘ಅ’ಕಾರದಿಂದ ಶುರುವಾಗಬೇಕು ಎಂಬುದು ನಿಯಮವಾಗಿಬಿಟ್ಟಿದೆ. ಅವರು ಬೇರೆ ಅಕ್ಷರಗಳಿಂದ ಪ್ರಾರಂಭವಾಗುವ ಚಿತ್ರಗಳನ್ನು ಮಾಡಿಲ್ಲ ಎಂದೇನಲ್ಲ. ಆದರೆ, ‘ಅ’ಕಾರದಿಂದ ಶುರುವಾಗುವ ಚಿತ್ರಗಳು ಹೆಚ್ಚು ಸಿಗುತ್ತವೆ. ‘ಅರಸು’, ‘ಆಕಾಶ್’, ‘ಅಪರೂಪ’, ‘ಅತಿರಥ’, ‘ಅಜಿತ್‍’, ‘ಅಭಯ್’ ಹೀಗೆ ಪಟ್ಟಿ ಬೆಳೆಯುತ್ತದೆ.

ಈಗ್ಯಾಕೆ ಈ ವಿಷಯ ಎಂದರೆ, ಇತ್ತೀಚೆಗೆ ಅವರು ‘ಸ್ಮೈಲ್‍ ಗುರು’ ರಕ್ಷಿತ್‍ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಪ್ರಾರಂಭಿಸಿದ್ದರು. ಈ ಚಿತ್ರಕ್ಕೆ ಅವರು ಏನು ಹೆಸರಿಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಚಿತ್ರಕ್ಕೆ ‘ಅಮ್ಮು’ ಎಂಬ ಹೆಸರನ್ನು ಇಡಲಾಗಿದೆ. ಅಷ್ಟೇ ಅಲ್ಲ, ಸಮುದ್ರದಾಳದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ.

ಈ ಚಿತ್ರದ ಶೀರ್ಷಿಕೆಯನ್ನು ಪುದುಚೇರಿಯ ಸಮುದ್ರದಾಳದಲ್ಲಿ ಬಿಡುಗಡೆ ಮಾಡಲಾಗಿದೆ. ನಾಯಕ ‘ಸ್ಮೈಲ್‍ ಗುರು’ ರಕ್ಷಿತ್‍ ಸ್ಕೂಬಾ ಡೈವಿಂಗ್ ಮಾಡಿ, ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಟೀಸರ್‍ ಬಿಡುಗಡೆ ಮಾಡಲಾಗಿದೆ. ‘ದುನಿಯಾ’ ವಿಜಯ್ ಟೀಸರ್‍ ಬಿಡುಗಡೆ ಮಾಡಿದ್ದಾರೆ. ‘ನೆನಪಿರಲಿ’ ಪ್ರೇಮ್‍ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಟೀಸರ್‍ ಬಿಡುಗಡೆ ಮಾತನಾಡಿದ ‘ದುನಿಯಾ’ ವಿಜಯ್‍, ‘ಈ ಚಿತ್ರದ ಶೀರ್ಷಷಿಕೆಯನ್ನು ಸಮುದ್ರದಾಳದಲ್ಲಿ ಬಿಡುಗಡೆ ಮಾಡಿದಂತೆ, ನಾನು ಮತ್ತು ಪ್ರೇಮ್ ಸಹ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿದ್ದೇವೆ. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ, ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ತಪ್ಪು ಮಾಡಿದರೆ ತಿದ್ದಿ. ಮಹೇಶ್‍ ಬಾಬು ಹಿರಿಯ ನಿರ್ದೇಶಕರು. ಅವರದ್ದು ಅದ್ಭುತ ವ್ಯಕ್ತಿತ್ವ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ಮಹೇಶ್ ಬಾಬು ತಮ್ಮ ಪ್ರತಿ ಚಿತ್ರದಲ್ಲೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿರುತ್ತಾರೆ. ಈಗ ಅವರು ಈ ಸಿನಿಮಾ ಮೂಲಕ ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ‘ಸ್ಮೈಲ್ ಗುರು’ ರಕ್ಷಿತ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್‍ಗೂ ಮೊದಲ ಹೆಜ್ಜೆ. ಇನ್ನು, ಜೆರುಷಾ ಮತ್ತು ಅಮೃತಾ ಪ್ರೇಮ್‍ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

MMM ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಸತ್ಯ ಅವರು ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ.

Tags: