ಹನೂರು: ಹನೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಲು ಅನುಮತಿ ಪಡೆದುಕೊಂಡಿರುವವರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ವೃತ್ತ ನಿರೀಕ್ಷಕ ಶಶಿಕುಮಾರ್ ತಿಳಿಸಿದ್ದಾರೆ.
ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಮೂರ್ತಿ ವಿಸರ್ಜನಾ ಸಂಬಂಧ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವವರು, ತಾವು ಅನುಮತಿ ಪಡೆದುಕೊಂಡಿರುವಷ್ಟು ದಿನ ಇಟ್ಟು ಪೂಜೆ ಸಲ್ಲಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ವಿಸರ್ಜನೆ ಮಾಡಬೇಕು. ವಿಸರ್ಜನಾ ಸಂದರ್ಭದಲ್ಲಿ ಡಿಜೆ ಬಳಸುವಂತಿಲ್ಲ. ವಿಸರ್ಜನಾ ಸಮಯದಲ್ಲಿ ಏಕ ಗವಾಕ್ಷಿ ಸಮಿತಿ ನೀಡಿರುವ ಮಾರ್ಗಸೂಚಿಯಂತೆ ವಿಸರ್ಜನೆ ಮಾಡಬೇಕು. ಕೆರೆಕಟ್ಟೆಗಳಲ್ಲಿ ವಿಸರ್ಜನೆ ಮಾಡದೆ ನಿಗದಿತ ಸ್ಥಳಗಳಲ್ಲಿ ವಿಸರ್ಜನೆ ಮಾಡಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವವರು ರಾತ್ರಿ ಹತ್ತು ಗಂಟೆಯ ನಂತರ ಧ್ವನಿವರ್ಧಕ ಬಳಸುವಂತಿಲ್ಲ. ಧ್ವನಿ ವರ್ಧಕ ಬಳಸುವಾಗ ಅಕ್ಕಪಕ್ಕದವರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದಾದರೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಒಂದೊಮ್ಮೆ ಯಾವುದಾದರು ಅಹಿತಕರ ಘಟನೆಗಳು ನಡೆದರೆ, ಗಣೇಶ ಮೂರ್ತಿ ಪ್ರತಿಷ್ಠಾಪನ ಸಂಬಂಧ ಅನುಮತಿ ಪಡೆದಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಸಭೆ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಎಎಸ್ಐ ಕೃಷ್ಣ, ಪುಟ್ಟಸ್ವಾಮಿ ಪೇದೆಗಳಾದ ರಾಘವೇಂದ್ರ, ಕಾಮರಾಜು, ಮೂರ್ತಿ, ಶಿವು, ಪ್ರಭು, ವಿಶ್ವನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.