Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೆಂಪಿಸಿದ್ದನಹುಂಡಿ ರೈತರ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ತಾತ್ಕಲಿಕ ಹಿಂತೆಗೆತ

ಸಮಸ್ಯೆ ಪರಿಹರಿವುದಾಗಿ ಜಿಲ್ಲಾಧಿಕಾರಿಗಳ ಆಶ್ವಾಸನೆ

ಪ್ರತಿಭಟನಾ ಧರಣಿ ತಾತ್ಕಾಲಿಕ ಹಿಂತೆಗೆತ

ಮೈಸೂರು: ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿಯ ವಿರುದ್ಧ ಕೆಂಪಿಸಿದ್ದನಹುಂಡಿ ‌ರೈತರಿಂದ ಬುಧವಾರ ಅನಿರ್ದಿಷ್ಟಾವದಿ ಧರಣಿಯನ್ನು ಕೈಗೊಂಡಿದ್ದರು.

ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಖುದ್ದು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳ ಮಾತು ಒಪ್ಪಿದ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆಕೊಂಡರು.

ಈ ವೇಳೆ ಮಾತನಾಡಿದ ಎಐಕೆಕೆಎಂಎಸ್‌ನ ಜಿಲ್ಲಾ ನಾಯಕರಾದ ಬಸವರಾಜು ಹೆಚ್‌.ಎಂ, ಕಳೆದ ವರ್ಷ ರೈತರ ಹಲವಾರು ಹೋರಾಟಗಳ ನಂತರ, ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಜಿಲ್ಲಾಮಟ್ಟದ ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯ ಶಿಫರಾಸ್ಸಿನಂತೆ, ಉದ್ಯೋಗ ನೀಡಬೇಕೆಂದು ಕೆಲವು ಕೈಗಾರಿಕೆಗಳಿಗೆ ಕೆಐಎಡಿಬಿಯ ಅಧಿಕಾರಿಗಳು ಪತ್ರವನ್ನು ನೀಡಿದ್ದಾರೆ. ಆದರೆ ಈ ಪತ್ರಗಳಿಗೆ ಕಾರ್ಖಾನೆಗಳು ಸ್ಪಂದಿಸುತ್ತಿಲ್ಲ.
ನಂತರ 2024ರ ಆಗಸ್ಟ್ 29‌ ರಂದು ಕೆಐಎಡಿಬಿಯ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟವನ್ನು ಶುರು ಮಾಡಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದ ಕೆಐಎಡಿಬಿಯ ಅಧಿಕಾರಿಗಳು 2024ರ ಸೆಪ್ಟಂಬರ್‌ 4ರಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರೈತರಿಗೆ ಕೆಲಸ ನೀಡಬೇಕಿರುವ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದರು. ಆ‌ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಳ್ಳಲಾಗಿತ್ತು. ಆದರೆ ಸದರಿ ಸಭೆಯೂ, ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ತಿರ್ಮಾನವಾಗಲಿಲ್ಲ. ಹಾಗೂ ಸಮಿತಿಯ ಸಭೆಗೆ ಕಾರ್ಖಾನೆಯವರನ್ನು ಕರೆದರೆ ಯಾವುದೇ ಕಾರ್ಖಾನೆಯವರು ಸಭೆಗೆ ಬರುತ್ತಿಲ್ಲ. ಇವರ ವಿರುದ್ಧ ಯಾವುದೇ ಕ್ರಮಗಳನ್ನು ಇದುವರೆಗೂ ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಜಂಟಿ ನಿರ್ದೇಶಕರಾಗಲಿ, ಕೆಐಎಡಿಬಿಯ ಅಧಿಕಾರಿಗಳಾಗಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬದಲಿಗೆ ರೈತ ನಾಯಕರ ಮುಂದೆ ತಮ್ಮ ಅಸಹಾಯಕತೆಯನ್ನು ತೊರುತ್ತಿದ್ದಾರೆ. ಹಾಗಾಗಿ ಸಮಿತಿಯು ಸಭೆಗಳಿಗೆ ಬಾರದ ಕೈಗಾರಿಕೆಗಳ ಮೇಲೆ ಕ್ರಮವೇನು? ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಮುಂದಿನ ವಾರ ನನ್ನ ಅಧ್ಯಕ್ಷತೆಯಲ್ಲಿಯೇ ಸಭೆ ಕರೆಯಲಾಗುವುದು. ಎಲ್ಲಾ ಕೈಗಾರಿಕೆಯವರಿಗೂ ಕಡ್ಡಾಯವಾಗಿ ಸಭೆಗೆ ಬರಲು ತಿಳಿಸಲಾಗುವುದು. ನನ್ನ ಮಾತಿನ ಮೇಲೆ ನಂಬಿಕೆ ಇಟ್ಟು ಈ ಹೋರಾಟವನ್ನು ಹಿಂಪಡೆಯಿರಿ ಎಂದು ಹೋರಾಟಗಾರರಲ್ಲಿ ಮನವಿ ಮಾಡಿದರು.

ಒಂದು ವರ್ಷದಿಂದ ಹಲವಾರು ಸಭೆಗಳು ನಡೆದಿವೆ. ರೈತರಿಗೆ ಹೋರಾಟ ಮಾಡದೆ ಬೇರೆ ದಾರಿಯಿಲ್ಲ. ಮತ್ತೆ ಈ ಸಭೆಯಲ್ಲಿ ರೈತರಿಗೆ ಕೆಲಸ ಕೊಡಿಸಲು ಜಿಲ್ಲಾಢಳಿತ ವಿಫಲವಾದರೆ ಮತ್ತೆ ತೀವ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದ ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಜಿಲ್ಲಾಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಅಹೋರಾತ್ರಿ ಹೋರಾಟವನ್ನು ಹಿಂಪಡೆಯಲಾಗಿದೆ ಎಂದರು.

Tags: