ಹನೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಮಾಜಿ ಶಾಸಕ ಆರ್.ನರೇಂದ್ರ ಅವರು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹನೂರು ತಾಲ್ಲೂಕಿನ ಎಲ್ಲೇಮಾಳ ಗ್ರಾಮದ ಮಹದೇವ ಎಂಬುವವರು ಕೆಲಸದ ನಿಮಿತ್ತ ಹನೂರು ಪಟ್ಟಣಕ್ಕೆ ಹೋಗಿದ್ದರು. ಬಳಿಕ ಕೆಲಸ ಮುಗಿಸಿ ಎಲ್ಲೇಮಾಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮುಖ್ಯ ರಸ್ತೆಯಲ್ಲಿ ಕೋತಿಯೊಂದು ಅಡ್ಡ ಬಂದಿತ್ತು. ಕೋತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು.
ಇದೇ ರಸ್ತೆಯ ಮೂಲಕ ಹನೂರಿಗೆ ಹೋಗುತ್ತಿದ್ದ ಮಾಜಿ ಶಾಸಕ ಆರ್.ನರೇಂದ್ರ ಅವರು ಅಪಘಾತದ ದೃಶ್ಯವನ್ನು ಕಂಡು, ಗಾಯಗೊಂಡಿದ್ದ ಮಹದೇವರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ಸಹ ಇದ್ದರು.
ಗಾಯಾಳು ಮಹದೇವ ಎಂಬುವವರನನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲು ಕಳುಹಿಸಿಕೊಟ್ಟರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ನರೇಂದ್ರ ಅವರು, ಪ್ರತಿಯೊಬ್ಬ ವಾಹನ ಸವಾರರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಂಚಾರ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ. ಸರ್ಕಾರವು ವಾಹನ ಸವಾರರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಹಲವಾರು ಸಂಚಾರಿ ನಿಯಮಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಈ ಮೂಲಕ ನಿಯಮ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.