ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಪುಟ್ಟದಾಗಿ ಟೀ ಅಂಗಡಿ ಇಟ್ಟುಕೊಂಡ ಸುಭದ್ರಮ್ಮ ಅವರು ನಿಜದ ಗಟ್ಟಿಗಿತ್ತಿ. ವರ್ಷ ಅರವತ್ತೈದನ್ನು ದಾಟುತ್ತಿದ್ದರೂ ಇವರ ಬದುಕಿನ ಉತ್ಸಾಹವನ್ನು ಕಾಣುವಾಗೆಲ್ಲ ಸೋಜಿಗ ಖಾಲಿ ಕೂತು ತಿನ್ನಬಾರದು, ಮನುಷ್ಯ ದುಡಿದು ತಿನ್ನಬೇಕು ಎನ್ನುವುದು ಕಾಯಕ ತತ್ವ. ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ ಸಂಸಾರದ ಜವಾಬ್ದಾರಿ ಹೆಗಲಿಗೆ ಬಿತ್ತು. ನಿಭಾಯಿಸಿಕೊಂಡು ಹೋಗುವುದು ಅನಿವಾರ್ಯವಾಯಿತು. ಸ್ವಾವಲಂಬಿ ಆಗಬೇಕಿದ್ದರೆ ಕೆಲಸ ಮಾಡಬೇಕೆಂಬ ಪಾಠವನ್ನು ಮಗಳಿಗೂ ಬೋಧಿಸಿದ್ದರು. ಮಗಳು ಕೈ ಹಾಕಿದ ಕಾರ್ಯದಲ್ಲಿ ನಷ್ಟವಾದ್ದರಿಂದ ತನ್ನ ದುಡಿಮೆಯೂ ಮನೆಗೆ ಅವಶ್ಯವಾಯಿತೆಂಬ ಬದುಕಿನ ಸತ್ಯವನ್ನು ತೆರೆದಿಡುತ್ತಾರೆ.
ಬೆಳಿಗ್ಗೆ ಹತ್ತು ಗಂಟೆಗೆ ತೆರೆದ ಅಂಗಡಿ, ಮುಚ್ಚುವುದು ರಾತ್ರಿ ಒಂಬತ್ತರ ಹೊತ್ತಿಗೆ, ಗೂಡಂಗಡಿಯೊಳಗೆ ಟೀ ಮಾಡುತ್ತಾ, ಕುರುಕಲು ತಿಂಡಿ, ಚಾಕಲೇಟ್ ಮಾರುತ್ತಾರೆ. ಪುಟ್ಟ ಗೂಡಿನಂತಿರುವ ಅಂಗಡಿಯೊಳಗೆ ದಿನವಿಡೀ ಕೂತುಕೊಂಡೇ ಇರುತ್ತಾರೆ. ಒಂದೇ ಭಂಗಿಯಲ್ಲಿ ಎಷ್ಟು ಹೊತ್ತು ಕೂರಲಾದೀತು? ಕಷ್ಟದ ಬಗ್ಗೆ ಕೇಳಹೊರಟರೆ, ‘ನೋಡಿ, ಕೂತ್ಕಂಡ್ ಮಾಡೋ ಕೆಲ್ಸ. ಆರಾಮವಾಗಿ ಕೆಲ್ಸ ಮಾಡೋ ಯೋಗ ಸಿಕ್ಕಿದೆ’ ಎಂಬ ಇವರ ನಗುವಿನಲ್ಲಿ ಬದುಕಿನ ಅಸಹಾಯಕತೆಯೂ ಇದ್ದಂತಿತ್ತು. ಸುಭದ್ರಮ್ಮನಿಗೆ ಏನಾದರೂ ಆಯಿತೆಂದಾಗ ತನ್ನನ್ನು ನೋಡುತ್ತಾ, ಶಕ್ತಿ ತುಂಬುವ ದೇವರು ತನ್ನ ಜೊತೆಗಿದ್ದಾರೆ ಎಂಬುದೇ ಭರವಸೆ.