ಬೆಂಗಳೂರು: ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಥಾವರ್ ಚಂದ್ ಗೆಹ್ಲೋಟ್ ಅವರು ಬಿಜೆಪಿಯಿಂದಲೇ ರಾಜ್ಯಪಾಲರಾಗಿರಬಹುದು. ಆದರೆ ಸಾಂವಿಧಾನಿಕ ಹುದ್ದೆ ಮೇಲೆ ಗೌರವ ಕೊಡಬೇಕು. ಸಂವಿಧಾನದ ಪ್ರಕಾರ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೀಗಿರುವಾಗ ಅವರು ಎಲ್ಲಿ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಎಚ್‌ಡಿಕೆ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಕೇಳಿದ್ದೆವು. ಆದರೆ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಮೈಸೂರು ಮುಡಾದ 14 ಸೈಟ್ ಬಗ್ಗೆ ರಾಜ್ಯಪಾಲರಿಗೆ ಕಾಳಜಿ ಜಾಸ್ತಿಯಾಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ರಾಜ್ಯಪಾಲರ ವಿರುದ್ಧ ತೀವ್ರ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಒಳ್ಳೆಯದಲ್ಲ. ಪೂರ್ಣ ಬಹುಮತವಿರುವ ಸರ್ಕಾರಕ್ಕೆ ಡಿಸ್ಟರ್ಬ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.