Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮುಡಾ ಹಗರಣ: ತಪ್ಪು ಮಾಡಿದವರ ಮೇಲೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಮೈಸೂರು: ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿರುವ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್‌ ಅವರನ್ನು ನಗರಾಭಿವೃದ್ಧಿ ಇಲಾಖೆ ಅಮಾನತು ಮಾಡಿದೆ ಎಂದರು.

ಅವರು ಇಂದು (ಸೆಪ್ಟೆಂಬರ್ 03) ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಬ್ಬರೂ ಆಯುಕ್ತರ ಮೇಲೆ ಆರೋಪ ಕೇಳಿಬಂದಿತ್ತು. ಒಬ್ಬರನ್ನು ಮಾತ್ರ ಅಮಾನತು ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಆಯೋಗ ರಚಿಸಲಾಗಿದ್ದು, ಅವರ ವರದಿ ಪ್ರಕಾರ ಯಾರು ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದರು.

2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲವಾದರೂ ಅನ್ವಯ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ನಾನು ಸುಳ್ಳು ಹೇಳಿಲ್ಲ ಹಾಗೂ ತಪ್ಪು ಮಾಡಿಲ್ಲ: ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಮಾಡುತ್ತಿದ್ದೇನೆ. ವಿರೋಧ ಪಕ್ಷದವರಿಗೆ ಸುಳ್ಳು ಹೇಳಿರುವುದು ರುಜುವಾತಾಗದೆ ಹೋದರೆ ಕಷ್ಟವಾಗುತ್ತದೆ ಎಂದು ಯೋಚಿಸುತ್ತಿದ್ದಾರೆ. ನಾನು ಸುಳ್ಳು ಹೇಳಿಲ್ಲ ಹಾಗೂ ತಪ್ಪು ಮಾಡಿಲ್ಲ ಎಂದರು.

ಮುಖ್ಯಮಂತ್ರಿಯನ್ನು ಶಾಸಕರು, ವರಿಷ್ಠರು ಆಯ್ಕೆ ಮಾಡುತ್ತಾರೆ: ಶಾಸಕ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಗಳಾಗಿರುತ್ತಾರೆ. ಸಿಎಂ ಒಪ್ಪಿಗೆ ಕೊಟ್ಟರೆ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಮುಖ್ಯಮಂತ್ರಿಯನ್ನು ಶಾಸಕರು, ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದರು.

ಕೋವಿಡ್ ಭ್ರಷ್ಟಾಚಾರ ಕುರಿತ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ: ಕೋವಿಡ್ ಸಂದರ್ಭದಲ್ಲಿ ಆಗಿರುವ ಭ್ರಷ್ಟಾಚಾರ ಕುರಿತ ವರದಿ ಸಲ್ಲಿಕೆಯಾಗಿದ್ದು ಈ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅಂದು ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜಕೀಯ ಉದ್ದೇಶದಿಂದ ವರದಿ ತರಿಸಲಾಗಿದೆ ಎಂದು ಸಂಸದ ಸುಧಾಕರ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಏಕೆ ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ವರದಿಯಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ. ತಪ್ಪು ಮಾಡಿರುವುದರಿಂದ ಚಡಪಡಿಸುತ್ತಿದ್ದಾರೆ. ಸುಳ್ಳು ವರದಿ ತರಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಲು ವರದಿ ಬಹಿರಂಗವಾಗಿಲ್ಲ. ಆದರೂ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಮನಸ್ಥಿತಿ ಏನಾಗಿದೆ ತಿಳಿಯುತ್ತದೆ ಎಂದರು.

ಏಳು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ವರದಿ ಬಗ್ಗೆ ನನಗೆ ತಿಳಿದಿಲ್ಲ, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ವಿಳಂಬ: ಪರಿಶೀಲನೆ
ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿನಿಂದ ಸಂಬಳ ದೊರೆತಿಲ್ಲದಿರುವ ಬಗ್ಗೆ ಮಾತನಾಡಿ ಸಂಬಳ ನೀಡಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

Tags: