ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಕೇವಲ ನಾಟಕದ ಮತ್ತೊಂದು ಅಧ್ಯಾಯವಷ್ಟೆ ಎಂಬುದು ಬೆಂಗಳೂರಿನ ಜನತೆಯ ಬಲವಾದ ನಂಬಿಕೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು “ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿರುವುದು ಬ್ರ್ಯಾಂಡ್ ಬೆಂಗಳೂರು ನಾಟಕದ ಮತ್ತೊಂದು ಅಧ್ಯಾಯವಷ್ಟೇ ಎಂಬುದು ಬೆಂಗಳೂರಿನ ಜನತೆಯ ಬಲವಾದ ನಂಬಿಕೆ.
ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಅನೇಕ ಹೇಳಿಕೆಗಳು ಘೋಷಣೆಯಲ್ಲೇ ಉಳಿದಿರುವುದರಿಂದ ಸಾರ್ವಜನಿಕರಿಗೆ ಇವರ ಮೇಲೆ ಕಿಂಚಿತ್ತೂ ನಂಬಿಕೆಯೇ ಇಲ್ಲದಂತಾಗಿದೆ.
ಬೆಂಗಳೂರಿನ ಜನತೆಗೆ:
ಮೇಕೆದಾಟು ನೀರು ಸಿಗುವ ನಂಬಿಕೆ ಇಲ್ಲ
ರಸ್ತೆ ಗುಂಡಿ ಮುಚ್ಚುವ ಬಗ್ಗೆ ನಂಬಿಕೆ ಇಲ್ಲ
ಮನೆ ಬಾಗಿಲಿಗೆ ಆಡಳಿತ ಘೋಷಣೆ ಬಗ್ಗೆ ನಂಬಿಕೆ ಇಲ್ಲ
ಕಾನೂನು ಸುವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ
ನುಡಿದಂತೆ ನಡೆದಿದ್ದೇವೆ ಎಂಬ ಬಗ್ಗೆ ನಂಬಿಕೆ ಇಲ್ಲ
ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆಯಂತೂ ಎಳ್ಳಷ್ಟೂ ನಂಬಿಕೆ ಇಲ್ಲ.
ಒಟ್ಟಿನಲ್ಲಿ ಈ ಅಪನಂಬಿಕೆ ಸರ್ಕಾರದಿಂದ ನಂಬಿಕೆ ಹೆಸರಿನಲ್ಲಿ ಯೋಜನೆ ಘೋಷಣೆ ಆಗಿರುವುದು ಈ ಶತಮಾನದ ಅತ್ಯಂತ ದೊಡ್ಡ ವಿರೋಧಾಭಾಸ ಎಂದರೆ ಅತಿಶಯೋಕ್ತಿ ಅಲ್ಲ” ಎಂದು ಬರೆದುಕೊಂಡಿದ್ದಾರೆ.