ರಚಿತಾ ರಾಮ್ ಅಭಿನಯದ ‘ಶಬರಿ’, ‘ಲವ್ ಮೀ ಆರ್ ಹೆಟ್ ಮೀ’ ಚಿತ್ರಗಳ ಸುದ್ದಿಯೇ ಇಲ್ಲ. ಈ ಚಿತ್ರಗಳ ಚಿತ್ರೀಕರಣ ಆಗಿದೆಯಾದರೂ, ಮುಂದೇನು ಗೊತ್ತಿಲ್ಲ. ಇನ್ನು, ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಹೊರತುಪಡಿಸಿದರೆ ರಚಿತಾ ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ. ರಚಿತಾ ಮುಂದಿನ ನಡೆಯೇನು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರಕ್ಕೆ ರಚಿತಾ ಇದೀಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಬನಾರಸ್’ ಬಿಡುಗಡೆಯಾಗಿ ಒಂದೂವರೆ ವರ್ಷಗಳಾದರೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದ ಝೈದ್, ಈ ವರ್ಷದ ಆರಂಭದಲ್ಲಿ ‘ಕಲ್ಟ್’ ಎಂಬ ಚಿತ್ರ ಒಪ್ಪಿದ್ದರು. ಯುಗಾದಿಯ ಪ್ರಯುಕ್ತ ಪೋಸ್ಟರ್ ಬಿಡುಗಡೆ ಆಗಿತ್ತು. ಆ ನಂತರ ಚಿತ್ರತಂಡದಿಂದ ಯಾವೊಂದು ಸುದ್ದಿಯೂ ಇರಲಿಲ್ಲ. ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ.
ಈ ಚಿತ್ರವನ್ನು ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು, ಈ ಚಿತ್ರದಲ್ಲಿ ಝೈದ್ ಖಾನ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ‘ಬ್ಲಡಿ ಲವ್’ ಎಂಬ ಟ್ಯಾಗ್‍ಲೈನ್ ಇದ್ದು, ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಶುರುವಾಗಿದೆ.
ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.