Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸ್ಮರಣ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ನೆಲ, ಭಾಷೆಗೆ ಹೆಚ್ಚಿನ ಆದ್ಯತೆ : ಡಾ ಹೆಚ್ ಎಲ್ ನಾಗರಾಜು

ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿಡುಗಡೆ ಮಾಡಲಾಗುವ ಸ್ಮರಣ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ನೆಲ, ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಸ್ಮರಣಾ ಸಂಚಿಕೆ ಸಮಿತಿ ಅಧ್ಯಕ್ಷರಾದ ಡಾ ಹೆಚ್ ಎಲ್ ನಾಗರಾಜು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದುವರೆಗೂ ನಡೆದಿರುವ ಒಟ್ಟು 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯ ಮೂಲದವರಾಗಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದ ವ್ಯಕ್ತಿಗಳ ಬಗ್ಗೆ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಬೇಕು. ಜೊತೆಗೆ ಜಿಲ್ಲೆಯಲ್ಲಿ ಸಾಧನೆಗೈದ ಸಾಹಿತಿಗಳು, ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಸಾಹಿತ್ಯ ಹಾಗೂ ಕೊಡುಗೆಗಳು ಒಳಗೊಂಡಂತೆ ಸ್ಮರಣ ಸಂಚಿಕೆ ರಚನೆಯಾಗಬೇಕು ಎಂದರು.

ಇಂದಿನ ಯುವ ಜನರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಸ್ಮರಣಾ ಸಂಚಿಕೆಯಲ್ಲಿ ಈ ವಿಷಯ ಹೆಚ್ಚು ಪರಿಣಾಮಕಾರಿಯಾಗಿ ಮೂಡಿ ಬರಲಿ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದ್ದು, 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯು ಓದುಗರ ಸವಿ ನೆನೆಪಿನಲ್ಲಿ ಉಳಿಯುವ ಮಾಹಿತಿ ಬಂಡರವಾಗಬೇಕು ಎಂದರು.

ಸ್ಮರಣ ಸಂಚಿಕೆಯಲ್ಲಿ ಕನ್ನಡ, ಸಾಹಿತ್ಯ, ಭಾಷೆ, ನಾಡು,ಸಂಸ್ಕೃತಿ, ವಾಸ್ತುಶಿಲ್ಪ ಕುರಿತಂತೆ ಹೆಚ್ಚು ಲೇಖನಗಳು ಮೂಡಿ ಬರಲಿ. ಈ ಸ್ಮರಣ ಸಂಚಿಕೆ ನೆನಪಿನ ಸಂಪುಟವಾಗಲಿ ಎಂದರು.

ಎಲ್ಲರ ಸಮನ್ವಯದೊಂದಿಗೆ ಲೇಖನಗಳು ಮೂಡಿ ಬರಬೇಕು. ರಾಜಕೀಯದಲ್ಲಿ ಕೆಲಸ ಮಾಡಿದ ಹಲವಾರು ನಾಯಕರು ರಾಜ್ಯ ಹಾಗೂ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ‘ರಾಜಕೀಯ ಪ್ರಬುದ್ಧರು’ ಎಂಬ ಲೇಖನ ಮೂಡಿಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶೀರ್ಷಿಕೆ ಆಹ್ವಾನ ಸ್ಮರಣ ಸಂಚಿಕೆಗೆ ಶೀರ್ಷಿಕೆಯನ್ನು ಸಾರ್ವಜನಿಕರು ಲಿಖಿತ ರೂಪದಲ್ಲಿ ಪತ್ರದ ಮೂಲಕ ತಮ್ಮ ಹೆಸರು, ವಿಳಾಸದೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಸೆಪ್ಟೆಂಬರ್ 30 ರೊಳಗಾಗಿ ಜಿಲ್ಲಾ ಗ್ರಂಥಾಲಯಕ್ಕೆ ತಲುಪಿಸಬೇಕು. ಆಯ್ದ ಅತ್ಯುತ್ತಮ ಶೀರ್ಷಿಕೆಗೆ ಗೌರವ ಪುರಸ್ಕಾರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಸ್ಮರಣ ಸಂಚಿಕೆಗೆ ಸಂಬಂಧಿಸಿದಂತೆ ಅಕ್ಷರದ ಗಾತ್ರ, ನಿರ್ದಿಷ್ಟ ಪುಟ ವಿನ್ಯಾಸ, ಫಾಂಟ್, ಪುಟಗಳ ಸಂಖ್ಯೆ ಇನ್ನಿತರೆ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಲೇಖನವನ್ನು ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ಶ್ರಮ ವಹಿಸಿ ಕಾರ್ಯ ನಿರ್ವಹಿಸಿ. ಸ್ಮರಣ ಸಂಚಿಕೆಯಲ್ಲಿರುವವರು ಲೇಖನ ರಚನೆಗೆ ಬೇಕಾದ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ. ಇರುವ ಸಣ್ಣ ಸಮಯದಲ್ಲಿ ಉತ್ತಮ ಸಂಪುಟವನ್ನು ರಚಿಸೋಣ ಎಂದರು.

ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ಸಂಚಾಲಕರ ವಿವರಣೆ ಕೇಳಿದಾಗ ಈ ಸಂಚಿಕೆ ಎಲ್ಲವನ್ನು, ಎಲ್ಲರನ್ನು ಒಳಗೊಂಡ ನೆನಪಿನ ಸಂಪುಟವಾಗಲಿದೆ. ಇವುಗಳ ಜೊತೆಗೆ ಶಿಕ್ಷಣ ಮತ್ತು ಸಾಹಿತ್ಯದ ಮೇಲೆ ಕಂಪ್ಯೂಟರ್ ಪ್ರಭಾವ, ಇತ್ತೀಚಿಗೆ ಬೆಳವಣಿಗೆಯಾಗುತ್ತಿರುವ ಕೃತಕ ಬುದ್ಧಿಮತ್ತೆಯ ಬಗ್ಗೆ, ರಸ್ತೆಯ ಮೇಲೆ ನಿಲ್ಲುವ ಮಳೆ ನೀರು ನಿರ್ವಹಣೆ ಮತ್ತು ಅದರ ಪರಿಣಾಮ ಮುಂತಾದ ವಿಷಯಗಳು ಇದರಲ್ಲಿರಲಿ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಸ್ಮರಣ ಸಂಚಿಕೆಗೆ ಒಂದು ಒಳ್ಳೆಯ ಚೌಕಟ್ಟು ಸಿಕ್ಕಿದೆ.ಜಿಲ್ಲೆಯ ಜಲಮೂಲಗಳ ಸ್ಥಿತಿ ಮತ್ತು ಸಂರಕ್ಷಣೆ, ಗಾಂಧಿ ಭವನ, ಕೆ.ವಿ.ಶಂಕರಗೌಡ ಮತ್ತು ಜಿ.ಮಾದೇಗೌಡ ಅವರ ಬಗ್ಗೆ ಬರಹಗಳು ಇರಲಿ ಎಂದರು.

ಮಾದರಿ, ಅನುಕರಣೀಯ ಸಂಚಿಕೆ ಮ ರಾಮಕೃಷ್ಣ

ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಮ ರಾಮಕೃಷ್ಣ ಸಂಚಿಕೆಯ ಸ್ಥೂಲ ಪರಿಚಯ ಮಾಡಿಕೊಟ್ಟರು. ಸ್ಮರಣ ಸಂಚಿಕೆಯನ್ನು ೧೦ ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು ಆಶೀರ್ವಚನ- ಸಂದೇಶಗಳು, ಪ್ರಾಸ್ತಾವಿಕ ನುಡಿಗಳು, ಸಮ್ಮೇಳನ ಅಧ್ಯಕ್ಷರ ಪರಿಚಯ, ಹಿಂದೆ ನಡೆದ ಎರಡು ಸಮ್ಮೇಳನಗಳ ಅಧ್ಯಕ್ಷರ ಭಾಷಣ ಮತ್ತು ನೆನಪಿನ ಬರಹಗಳು, ಮಧುರ ಮಂಡ್ಯ, ಮಂಡ್ಯ- ಕರ್ನಾಟಕ-ಭಾರತ, ವಿಶ್ವ ಕರ್ನಾಟಕ, ಚಿತ್ರ ಸಂಪುಟ ಮತ್ತು ಅನುಬಂಧಗಳ ವಿಭಾಗಗಳಿರುತ್ತವೆ ಎಂಬ ಸ್ಥೂಲ ಮಾದರಿ ವಿವರಿಸಿ ಇದೊಂದು ಆದರ್ಶ, ಮಾದರಿ,ಅನುಕರಣೀಯ ನೆನಪಿನ ಸಂಪುಟವಾಗಲಿದೆ ಎಂದರು

ಉಪನ್ಯಾಸಕ,ಕವಿ ಕೆ.ಪಿ.ಮೃತ್ಯುಂಜಯ ಮಾತನಾಡಿ, ೧೯೭೪ ರ ಮೊದಲ ಸಮ್ಮೇಳನ ನಡೆದ ದಿನದಿಂದ ಇಂದಿನವರೆಗೆ ನಡೆದಿರುವ ಸಾಹಿತ್ಯ-ಸಂಸ್ಕೃತಿ ಅವಲೋಕನಗಳ ಬರಹಗಳನ್ನೊಳಗೊಂಡ ಬಹುತ್ವದ ಸಂಸ್ಕೃತಿಯನ್ನು ಪ್ರತಿನಿಧಿಸುವ ಲೇಖನವಿರಲಿ ಎಂದರು.

ನಿವೃತ್ತ ಪ್ರಾಂಶುಪಾಲ ಚಿಂತಕ ಹುಲ್ಲುಕೆರೆ ಮಹದೇವ ಮಾತನಾಡಿ ಬಿಎಂಶ್ರೀ ಅವರಿಂದ ಪ್ರಾರಂಭವಾಗಿ ಕನ್ನಡ ಕಟ್ಟುವ ಬಗೆಗಿನ ಮಾದರಿ, ಇತಿಹಾಸದ ಸ್ಥೂಲ ಅವಲೋಕನ ಮತ್ತು ಪರಿಣಾಮಗಳು,ರಾಜಕೀಯ ಅನನ್ಯತೆ ದೊರಕಿಸಿಕೊಟ್ಟವರು ಇದರಿಂದ ಉಂಟಾದ ಪ್ರೇರಣೆ ಮುಂತಾದವುಗಳನ್ನು ದಾಖಲಿಸಬೇಕು ಎಂದರು.

ಸಾಹಿತಿ ಚಿಕ್ಕಮರಳಿ ಬೋರೇಗೌಡ ೧೦ ವಿಭಾಗಗಳಲ್ಲಿ ಬರಬಹುದಾದ ಬರಹಗಳ ಶೀರ್ಷಿಕೆಗಳನ್ನು ಉಲ್ಲೇಖಿಸಿದರು.

ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಮಾತನಾಡಿ,  ಕಾಲದ ಮಿತಿಯಲ್ಲಿ ಸ್ಮರಣ ಸಂಚಿಕೆ ರೂಪುಗೊಳ್ಳಬೇಕಾಗಿರುವುದರಿಂದ ವಿವಿಧ ಸಂಘಟನೆಗಳಿಗೆ ಕೆಲವು ಜವಾಬ್ದಾರಿ ನೀಡಬಹುದು ಎಂಬ ಸಲಹೆ ನೀಡಿದರು.

ಶಿಕ್ಷಕ ನಂದೀಶ್ ಮಾತನಾಡಿ ಜಾಗತಿಕ ಮಟ್ಟದಲ್ಲಿ ಹಲವು ಕನ್ನಡಿಗರು ಮೇಯರ್ ಉಪ ಮೇಯರ್ ಮುಂತಾದ ಸ್ಥಾನಮಾನಗಳನ್ನು ಪಡೆದಿದ್ದಾರೆ. ಅಂತಹ ಕನ್ನಡಿಗರ ರಾಜಕೀಯ ಏಳಿಗೆ ಕುರಿತು ಒಂದು ಲೇಖನ ಇರಲಿ ಎಂದರು.

ಸಾಹಿತಿ ಲೀಲಾ ಅಪ್ಪಾಜಿ ಮಾತನಾಡಿ ಸ್ಮರಣ ಸಂಚಿಕೆ ಪರಾಮರ್ಶನ ಗ್ರಂಥವಾಗುವಂತಿರಬೇಕು ಎಂದರು.

ಸಭೆಯಲ್ಲಿ ಸ್ಮರಣಾ ಸಂಚಿಕೆಯ ಲೇಖಕರಿಗೆ ಗೌರವಧನ ನೀಡುವ ಬಗ್ಗೆ ಹಾಗೂ ರಾಜ್ಯದ ಎಲ್ಲಾ ಭಾಗಗಳಲ್ಲಿ ಸ್ಮರಣಾ ಸಂಚಿಕೆ ತಲುಪಿಸಿ ಮಾರಾಟ ಮಾಡುವ ಬಗ್ಗೆಯೂ ಚರ್ಚಿಸಲಾಯಿತು.

ಸಮಿತಿಯ , ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಹೆಚ್.ನಿರ್ಮಲ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಹರ್ಷ ವಿ ಪಣ್ಣೆದೊಡ್ಡಿ, ಬಿ.ಎಂ. ಅಪ್ಪಾಜಪ್ಪ, ಹೊಳಲು ಶ್ರೀಧರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಎಚ್.ವಿ.ಜಯರಾಮ್, ಸುಧಾಕರ್ ಹೊಸಹಳ್ಳಿ, ಎಸ್.ಬಿ.ಶಂಕರಗೌಡ,ಎಂ.ವೈ.ಶಿವರಾಮು,ಎಂಬಿಸುರೇಶ್,ಶ್ಯಾಮೇಶ್,ಸುಜಾತ ಕೃಷ್ಣ, ಮುಂತಾದವರು ಹಾಜರಿದ್ದರು.

Tags: