Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಎನ್ನಬೇಕಾಗುತ್ತದೆ, ಸರ್ಕಾರ ಸಂಪೂರ್ಣ ವಿಫಲವಾಗಿದೆ: ಆರ್‌.ಅಶೋಕ

ಇದೇ ಮೊದಲ ಬಾರಿಗೆ ತನಿಖೆಗೆ ಅನುಮತಿ ನೀಡಲಾಗಿದೆ ಎಂಬಂತೆ ಸಿಎಂ ಸಿದ್ದರಾಮಯ್ಯ ವರ್ತನೆ

ಬೆಂಗಳೂರು: ರಾಜಭವನವನ್ನು ಬಿಜೆಪಿ ಕಚೇರಿ ಎನ್ನುವುದಾದರೆ ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಎನ್ನಬೇಕಾಗುತ್ತದೆ. ಆಡಳಿತ ನಡೆಸುವ ಸರ್ಕಾರವೇ ಪ್ರತಿಭಟನೆಗೆ ಕೂರುತ್ತಿದೆ ಎಂದರೆ ಇದು ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಆಡಳಿತ ನಡೆಸುವವರೇ ಪ್ರತಿಭಟನೆ ಮಾಡುತ್ತಾರೆ ಎಂದರೆ ಸರ್ಕಾರ ವಿಫಲವಾಗಿದೆ ಎಂದರ್ಥ. ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಮಾಡಿಕೊಂಡು, ಅದರಂತೆ ಸರ್ಕಾರ ನಡೆಸಲಾಗುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳುತ್ತಾರಾ? ರಾಜಭವನ ಎಂದರೆ ಸಂವಿಧಾನದತ್ತ ಅಧಿಕಾರ. ರಾಜಭವನವನ್ನು ಬಿಜೆಪಿ ಕಚೇರಿ ಎನ್ನುವುದಾದರೆ, ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಎಂದು ನಾವು ಹೇಳುತ್ತೇವೆ ಎಂದರು.

ರಾಜ್ಯಪಾಲರು ಪರಿಶೀಲಿಸಿ ತನಿಖೆಗೆ ಅನುಮತಿ ನೀಡಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ವಿರುದ್ಧದ ತನಿಖೆಗೂ ಆಗಿನ ರಾಜ್ಯಪಾಲರು ಅನುಮತಿ ನೀಡಿದ್ದರು. ಆಗ ರಾಜಭವನ ಕಾಂಗ್ರೆಸ್‌ ಕಚೇರಿಯಾಗಿತ್ತೇ? ಕಾಂಗ್ರೆಸ್‌ ನಾಯಕರು ಕಿವಿಯ ಮೇಲೆ ಹೂ ಇಡುವುದನ್ನು ಬಿಟ್ಟು, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ ಎಂದರು.

ಸಿಎಂ ಸಿದ್ದರಾಮಯ್ಯ ಅವರ ಹಿಂದೆ ನಿಂತಿರುವ ಬಂಡೆಯನ್ನು ತಳ್ಳುವ ಶಕ್ತಿ ನಮಗಿಲ್ಲ. 136 ಶಾಸಕರಿದ್ದಾರೆ ಎಂದು ಅಹಂಕಾರದಿಂದ ಮೆರೆಯುವ ಕಾಂಗ್ರೆಸ್‌ ನಾಯಕರು, ಈ ಸರ್ಕಾರವನ್ನು ಬಿಜೆಪಿ ಬೀಳಿಸುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. 136 ಶಾಸಕರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂಬಿಕೆ ಇಲ್ಲ ಎಂಬುದು ಈ ಮೂಲಕ ಕಂಡುಬಂದಿದೆ ಎಂದರು.

ಎಲ್ಲರೂ ರಾಜೀನಾಮೆ ನೀಡಿ

ಪಕ್ಷದಿಂದ ಪ್ರತಿಭಟನೆ ಎನ್ನುವುದಾದರೆ ಎಲ್ಲ ಸಚಿವರು ರಾಜೀನಾಮೆ ನೀಡಿ ನಂತರ ಪ್ರತಿಭಟನೆ ಮಾಡಲಿ. ಇಲ್ಲಿ ಡಬಲ್‌ ಆಕ್ಟಿಂಗ್‌ ಮಾಡುವುದು ಬೇಡ. ರಾಜಭವನದ ದುರುಪಯೋಗ ಎನ್ನುವ ಆರೋಪ ಸವಕಲು ನಾಣ್ಯವಾಗಿದೆ. ಸಿದ್ದರಾಮಯ್ಯ ಅವರಿಗೆ ಭಯ ಏಕೆ? ಅವರ ರಕ್ಷಣೆಗೆ ನ್ಯಾಯಾಲಯವಿದೆ. ಕಾಂಗ್ರೆಸ್‌ನಲ್ಲೀಗ ಮ್ಯೂಸಿಕಲ್‌ ಚೇರ್‌ ನಡೆಯುತ್ತಿದ್ದು, ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಒಂದೊಂದು ಸಮುದಾಯದವರು ಒಂದೊಂದು ಕಡೆ ಆಹಾರದ ಮೇಳ ನಡೆಸುತ್ತಿದ್ದಾರೆ. ಎಲ್ಲರೂ ಸಿಎಂ ಕುರ್ಚಿಗೆ ಟವೆಲ್‌ ಹಾಕುತ್ತಿದ್ದಾರೆ. ಈ ಆಹಾರ ಮೇಳಗಳನ್ನು ಸಿಎಂ ಸಿದ್ದರಾಮಯ್ಯ ನಿಯಂತ್ರಿಸಲಿ ಎಂದರು.

Tags: