Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಧನ್ಯಾ ಅಭಿನಯದ ಮತ್ತೊಂದು ಚಿತ್ರ ಸೆ. 13ಕ್ಕೆ ಬಿಡುಗಡೆ

ಡಾ. ರಾಜಕುಮಾರ್‍ ಅವರ ಮೊಮ್ಮಗಳು ಮತ್ತು ರಾಮ್‍ಕುಮಾರ್‍ ಮಗಳಾದ ಧನ್ಯಾ ರಾಮ್‍ಕುಮಾರ್‍ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಮೊದಲು ‘ಹೈಡ್‍ ಆ್ಯಂಡ್‍ ಸೀಕ್‍’ ಎಂಬ ಚಿತ್ರ ಬಂತು. ನಂತರ ‘ದಿ ಜಡ್ಜ್ಮೆಂಟ್‍’ ಚಿತ್ರ ಬಿಡುಗಡೆಯಾಯಿತು. ಕಳೆದ ವಾರ ‘ಪೌಡರ್‍’ ಚಿತ್ರ ಹೊರಬಂತು. ಈ ಮೂರೂ ಚಿತ್ರಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಈಗ ಧನ್ಯಾ ಅಭಿನಯದ ಇನ್ನೊಂದು ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಸೆ. 13ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಅಂದಹಾಗೆ, ಈ ಚಿತ್ರದ ಹೆಸರು ‘ಕಾಲಾಪತ್ಥರ್’. ‘ದುನಿಯಾ’ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಚಿತ್ರದ ನಾಯಕನಾಗಿ ಅಭಿನಯಿಸಿದ್ದ ವಿಕ್ಕಿ ವರುಣ್‍, ನಾಯಕನಾಗಿ ನಟಿಸಿದ ಚಿತ್ರವಿದು. ವಿಕ್ಕಿ ಈ ಚಿತ್ರಕ್ಕೆ ಬರೀ ನಾಯಕನಷ್ಟೇ ಅಲ್ಲ, ನಿರ್ದೇಶಕರೂ ಹೌದು. ಸೂರಿ ಗರಡಿಯಲ್ಲಿ ಪಳಗಿದ್ದ ವಿಕ್ಕಿ, ಸೂರಿ ನಿರ್ದೇಶನದ ಕೆಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಈಗ ಮೊದಲ ಬಾರಿಗೆ ‘ಕಾಲಾಪತ್ಥರ್‍’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಈ ಚಿತ್ರದಲ್ಲಿ ಧನ್ಯ, ಗಂಗಾ ಎಂಬ ಶಾಲಾಶಿಕ್ಷಕಿಯ ಪಾತ್ರ ನಿರ್ವಹಿಸಿದ್ದಾರಂತೆ. ‘ನನ್ನ ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ನನಗೆ ಈಗಷ್ಟೇ ವಿಕ್ಕಿ ಅವರು ಚಿತ್ರದ ತುಣುಕು ತೋರಿಸಿದ್ರು. ಅದನ್ನು ನೋಡಿದ ಮೇಲೆ ನಾನಂತೂ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು.

ವಿಕ್ಕಿ ಅಭಿನಯದ ‘ಕೆಂಡಸಂಪಿಗೆ’ ಚಿತ್ರವು ಒಂಬತ್ತು ವರ್ಷಗಳ ಹಿಂದೆ ಸೆಪ್ಟೆಂಬರ್‍ ತಿಂಗಳಲ್ಲಿ ಬಿಡುಗಡೆ ಆಗಿತ್ತಂತೆ. ಈಗ ‘ಕಾಲಾಪತ್ಥರ್‍’ ಚಿತ್ರ ಸಹ ಸೆಪ್ಟೆಂಬರ್‍ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಮಾತನಾಡುವ ವಿಕ್ಕಿ. ‘’‘ಕಾಲಾಪತ್ಥರ್’, ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ’ರಾಮ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್ ಕಥೆ ಬರೆದಿದ್ದಾರೆ. ವಿಜಾಪುರದ ಬಳಿ ಹೆಚ್ಚು ಚಿತ್ರೀಕರಣವಾಗಿದೆ. ಆಲಮಟ್ಟಿಯ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ನಮ್ಮ ಚಿತ್ರದ ಚಿತ್ರೀಕರಣವಾಗಿ ಕೆಲವೇ ತಿಂಗಳಲ್ಲೇ ಈ ಹಳ್ಳಿ ನೀರಿನಲ್ಲಿ ಮುಳುಗಡೆಯಾಗಿದೆ. ನಮ್ಮ ಚಿತ್ರವನ್ನು ‘ಮಾರ್ಟಿನ್’ ಚಿತ್ರದ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ವಿತರಣೆ ಮಾಡುತ್ತಿದ್ದಾರೆ’ ಎಂದರು.

‘ಕಾಲಾಪತ್ಥರ್’ ಚಿತ್ರವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಜೊತೆಯಾಗಿ ನಿರ್ಮಿಸಿದ್ದು, ಚಿತ್ರಕ್ಕೆ ಅನೂಪ್‍ ಸೀಳಿನ್‍ ಸಂಗೀತ ಸಂಯೋಜಿಸಿದ್ದಾರೆ.

Tags: