Mysore
21
scattered clouds

Social Media

ಬುಧವಾರ, 15 ಜನವರಿ 2025
Light
Dark

ಮನುಷ್ಯನು ಹೇಗೆ ಇರಬೇಕೆಂಬ ವಿವೇಕವನ್ನು ತಿಳಿಸಿದ ದೈವ ವ್ಯಕ್ತಿತ್ವವೇ ಶ್ರೀ ಕೃಷ್ಣ: ವಿ.ಎನ್ ಮಲ್ಲಿಕಾರ್ಜುನಸ್ವಾಮಿ

ಮೈಸೂರು: ಶತಮಾನಗಳ ಹಿಂದೆಯೇ ಕನಕದಾಸರು ಹೇಳಿರುವಂತೆ ತಂದೆ ತಾಯಿಯನ್ನು ಬಿಟ್ಟೇನು, ರಾಜ್ಯವನ್ನು ಬಿಟ್ಟೇನು ಏನನ್ನಾದರೂ ಬಿಟ್ಟೇನು ಆದರೆ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಎಂದು ಶ್ರೀ ಕೃಷ್ಣನ ಕುರಿತ ಕನಕದಾಸರು ಹಾಡಿದ್ದ ಗೀತೆಯನ್ನು ಉಲ್ಲೇಖಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಅವರು ಸ್ಮರಿಸಿದರು.

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾ ಮಂದಿರದ ಕಿರು ರಂಗ ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕೃಷ್ಣ ಎಲ್ಲಾ ಬಗೆಯ ಗುಣಗಳನ್ನು, ಭಾಂದವ್ಯಗಳನ್ನು ಹೊಂದಿದ್ದ ಮಹಾನ್ ಮಹೀಮ. ಅಸಂಖ್ಯಾತ ಬಾಲ ಲೀಲೆಗಳ ಪ್ರತಿನಿಧಿ. ಅಮರ ಪ್ರೇಮದ ಸಂಕೇತವಾಗಿದ್ದರು. ಅಲ್ಲದೇ ಅಪ್ರತಿಮ ತಂತ್ರಜ್ಞಾನಿ,ಇಡೀ ಜಗತ್ತನ್ನು ತನ್ನ ಶಕ್ತಿ-ಯುಕ್ತಿಗಳಿಂದ ಇಟ್ಟುಕೊಳ್ಳುವಂತಹ ಮಹನ್ ವ್ಯಕ್ತಿ ಶ್ರೀಕೃಷ್ಣ ಎಂದರು.

ಕೃಷ್ಣ ಅಸಾಧ್ಯ ಬುದ್ಧಿವಂತ ಜೊತೆಗೆ ತನ್ನ ಸ್ನೇಹಿತರಿಗೆ ಉತ್ತಮ ಗೆಳೆಯನಾಗಿದ್ದ. ಯುದ್ಧ ತಂತ್ರ ಕಲೆ, ಯುದ್ಧ ಮುನ್ನೆಡಿಸುವ ಕಲೆ, ಯುದ್ಧ ನಡೆಯದ ರೀತಿಯಲ್ಲಿ ತಡೆಯುವ ಬುದ್ಧಿಜೀವಿಯಾಗಿದ್ದನು. ಇಡೀ ಲೋಕದ ಒಳಿತಿಗೆ ಪ್ರತಿಯೊಬ್ಬ ಮನುಷ್ಯನೂ ಹೇಗೆ ಇರಬೇಕೆಂಬ ವಿವೇಕವನ್ನು ತಿಳಿಸಿದ ದೈವ ವ್ಯಕ್ತಿತ್ವವೇ ಶ್ರೀ ಕೃಷ್ಣ ಎಂದರು.

ಧರ್ಮರಾಜ್ಯ ಸ್ಥಾಪನೆಗಾಗಿ ನಾವು ಮಾಡುವ ಕಾಯಕದಲ್ಲಿ ನಿಷ್ಠೆಯಿಂದ ಇರಬೇಕು ಎಂಬುದನ್ನು ಗೀತೆಯ ಮೂಲಕ ತಿಳಿಸಿದ ಅಪ್ರತಿಮ ವ್ಯಕ್ತಿ ಶ್ರೀ ಕೃಷ್ಣ ಎಂದು ತಿಳಿಸಿದರು.

ಮೈಸೂರಿನ ಹಿರಿಯ ಸಾಹಿತಿಗಳಾದ ಡಾ. ಎನ್. ಕೆ. ರಾಮಶೇಷನ್ ಅವರು ಮಾತನಾಡಿ, ಭಗವಾನ್ ವಿಷ್ಣುವಿನ ಒಂಬತ್ತನೇ ಅವತಾರವಾದ ಭಗವಾನ್ ಕೃಷ್ಣನ ಜನ್ಮವನ್ನು ಈ ಜಯಂತಿಯು ಸೂಚಿಸುತ್ತದೆ. ಆವಣಿ ಅಥವಾ ಶ್ರಾವಣ ಮಾಸದಲ್ಲಿ ಕ್ಷೀಣಿಸುತ್ತಿರುವ ಚಂದ್ರನ ಅವಧಿಯ ಕೃಷ್ಣ ಪಕ್ಷದ 8 ನೇ ದಿನದಂದು ದಿನದ ಆಳುವ ನಕ್ಷತ್ರ ರೋಹಿಣಿಯಾಗಿದ್ದಾಗ ಭಗವಾನ್ ಕೃಷ್ಣ ಜನಿಸಿದನು ಎಂದರು.

ಸುಮಾರು 5000 ವರ್ಷಗಳ ಹಿಂದೆ ದ್ವಾಪರ ಯುಗದಲ್ಲಿ ಅಧರ್ಮವನ್ನು ನಾಶಪಡಿಸಲು ಮತ್ತು ಜಗತ್ತಿನಲ್ಲಿ ಸದಾಚಾರವನ್ನು ನೀಡಲು ಜನಿಸಿದಂತಹ ವ್ಯಕ್ತಿಯೇ ಶ್ರೀ ಕೃಷ್ಣ. ಅಲ್ಲಿಯವರೆಗೆ ನರಳುತ್ತಿದ್ದ ಮನುಕುಲಕ್ಕೆ ಶ್ರೀಕೃಷ್ಣನ ಜನನ ಆಶಾಕಿರಣ ಮೂಡಿಸಿತು ಎಂದು ತಿಳಿಸಿದರು.

ಶ್ರೀ ಕೃಷ್ಣ ಎಲ್ಲವನ್ನು ಬಲ್ಲವನು. 18 ಅಕ್ಷೋಹಿಣಿ ಸೈನ್ಯವನ್ನು ತಿಳಿದವನು.
ಮಥುರಾ ಮತ್ತು ಗೋಕುಲದಲ್ಲಿ ಇದ್ದ ಕೃಷ್ಣ. ರಾಜ್ಯವನ್ನ ಆಳದೆಯಿದ್ದರೂ ರಾಜ್ಯವನ್ನು ಆಳಿಸಿ, ರಾಜ್ಯದ ರಾಜ್ಯಭಾರ ಮಾಡುತ್ತಿದ್ದನು. ಸಂಸ್ಕೃತವನ್ನು ಬಲ್ಲವನಾದ ಶ್ರೀ ಕೃಷ್ಣ ಸಂಸ್ಕೃತಿಯ ಒಡೆಯ, ನಾಯಕ, ರಕ್ಷಕ ಎಂದು ಹೇಳಬಹುದು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ ಡಿ ಸುದರ್ಶನ್, ಕನ್ನಡಪರ ಹೋರಾಗಾರರಾದ ಮೂಗೂರು ನಂಜುಂಡಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: