ಆಂಧ್ರಪ್ರದೇಶ: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿಂದು 350 ಕಲಾವಿದರಿಂದ ಏಕಕಾಲದಲ್ಲಿ ಶ್ರೀನಾಮ ರಾಮಾಯಣಂ ನೃತ್ಯ ಪ್ರದರ್ಶನ ನಡೆಯಿತು.
ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಶನಿವಾರ ಮುಕ್ತಾಯಗೊಂಡಿದ್ದು, ಏಳು ದಿನಗಳ ಕಾಲ ರಾಯರ ಆರಾಧನೆ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ರಾಯರ ಆರಾಧನೆಯಲ್ಲಿ 67 ಲಕ್ಷ ಮಂದಿ ಭಾಗಿಯಾಗಿದ್ದರು. ಮೊದಲಿಗೆ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ನಂತರ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾಗಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಆರಾಧನೆ ಮುಗಿದ ಬಳಿಕ ಇಂದು ಮಠದ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಮಠದ ಕಾರಿಡಾರ್‌ನಲ್ಲಿ 350 ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ ನಡೆದಿದೆ.
ಸ್ಥಳೀಯರು, ಜರ್ಮನಿ, ಇಂಡೋನೇಷಿಯಾ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ್ದ 350 ನೃತ್ಯ ಕಲಾವಿದರು ಏಕಕಾಲದಲ್ಲಿ ನೃತ್ಯ ಪ್ರದರ್ಶಿಸಿದರು.
ಒಂದೇ ವೇದಿಕೆಯಲ್ಲಿ 15 ನಿಮಿಷಗಳ ಕಾಲ ಶ್ರೀನಾಮ ರಾಮಾಯಣಂ ಗೀತೆಗೆ ನೃತ್ಯ ಮಾಡುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆಯಲು ಕಲಾವಿದರು ನೃತ್ಯ ಪ್ರದರ್ಶನ ಮಾಡಿದ್ದಾರೆ.