ಆಂಧ್ರಪ್ರದೇಶ: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸದ ಅಂಗವಾಗಿ ಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು. ಮಹಾರಥೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಚಾಲನೆ ನೀಡಿದರು.
ಉತ್ತರಾಧನೆಯ ಮಹಾರಥೋತ್ಸವದ ವೈಭವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ರಾಯರ ದರ್ಶನ ಪಡೆದರು. ಗುರು ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ಉತ್ತರಾಧನೆಯ ಹಿನ್ನೆಲೆಯಲ್ಲಿ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.
ಈ ಬಾರಿಯ ಉತ್ತರಾಧನೆಯಲ್ಲಿ ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗವಹಿಸಿದ್ದರು. ಯದುವೀರ್ ಒಡೆಯರ್ ಅವರಿಗೆ ಮಠದಿಂದ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಸರ, ನಗದು ಜೊತೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಮೈಸೂರು ದಸರಾದಷ್ಟೇ ವಿಜೃಂಭಣೆಯಿಂದ ರಾಯರ ಆರಾಧನೆ ನಡೆಯುತ್ತಿದೆ. ಗುರುಗಳು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದರು.