ಮೈಸೂರು: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಾಸಕ ಶ್ರೀವತ್ಸ ಜಿ-ಕ್ಯಾಟಗರಿ ಸೈಟ್ ಪಡೆದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಲೇಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಯಾರೇ ಆದರೂ ಜಿ-ಕ್ಯಾಟಗರಿ ಸೈಟ್ ಪಡೆಯಬೇಕಾದರೆ ಸಾಂವಿಧಾನಿಕ ಹುದ್ದೆಯಲ್ಲಿರಬೇಕು. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಶ್ರೀವತ್ಸ ಜಿ-ಕ್ಯಾಟಗರಿ ಸೈಟ್ ಪಡೆದಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತ ಹೇಗೆ ಸೈಟ್ ಪಡೆಯಲು ಸಾಧ್ಯ. ಈ ಬಗ್ಗೆ ಶ್ರೀವತ್ಸ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
ಇನ್ನು ಸುಳ್ಳನ್ನೇ ಹತ್ತು ಬಾರಿ ಹೇಳಿ ಜನರಿಗೆ ನಂಬಿಸುವ ಕೆಲಸವನ್ನು ಬಿಜೆಪಿ-ಜೆಡಿಎಸ್‌ನವರು ಮಾಡುತ್ತಿದ್ದಾರೆ. ಇದು ದೊಡ್ಡ ದುರಂತದ ಸಂಗತಿ. ವೈಟ್ನರ್ ಹಾಕಿರುವುದನ್ನು ನೀವೇ ಊಹೇ ಮಾಡಿಕೊಂಡು ಸುಳ್ಳು ಹೇಳುವುದು ಖಂಡನೀಯ. ಸಿದ್ದರಾಮಯ್ಯ ಅವರಿಗೆ ಕೆಲಸ ಮಾಡಲು ಬಿಡುತ್ತಾ ಇಲ್ಲ. ಪ್ರಕರಣ ತನಿಖೆಯಲ್ಲಿದೆ. ತನಿಖೆ ಮುಗಿದ ಬಳಿಕ ವರದಿ ಏನು ಬರುತ್ತೆ ಕಾದು ನೋಡೋಣ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ 63 ಕೇಸ್‌ಗಳಿವೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, 2007ರಿಂದ 2023ರವರೆಗೆ ಸಿದ್ದರಾಮಯ್ಯ ಅವರ ಮೇಲಿರುವ ಕೇಸ್‌ಗಳು ಕೇವಲ 20. ಅವುಗಳೆಲ್ಲಾ ಬಹುತೇಕ ಸಣ್ಣ-ಪುಟ್ಟ ಕೇಸ್‌ಗಳು ಅಷ್ಟೇ. ಯಾವ ಆಧಾರದ ಮೇಲೆ ಕುಮಾರಸ್ವಾಮಿ ಅವರು 63 ಕೇಸ್ ಇವೆ ಅಂತ ಹೇಳಿದ್ರು ಗೊತ್ತಿಲ್ಲ ಎಂದು ಟೀಕೆ ಮಾಡಿದರು.